ಕೊಪ್ಪಳ: ಆಧುನಿಕ ಜಗತ್ತಿನ ಶೋಕಿ ಬದುಕಿಗೆ ಮರುಳಾಗಿ ವಯಸ್ಸಾದ ತಂದೆ ತಾಯಿಯನ್ನ ಕೀಳಾಗಿ ಕಾಣುವ, ಮುಪ್ಪಿನ ಕಾಲದಲ್ಲಿ ಸೇವೆ ಮಾಡುವ ಬದಲು, ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಪಾಠ ಹೆಚ್ಚುತ್ತಿದೆ. ಇಂತಹ ಕಾಲಘಟ್ಟದಲ್ಲಿ ನಾಲ್ವರು ಸಹೋದರರು ತಮ್ಮ ತಂದೆಯನ್ನ ಕೊನೆಯವರೆಗೆ ಪ್ರೀತಿಯಿಂದ ಆರೈಕೆ ಮಾಡಿ, ಅವರು ಕಾಲವಾದ ನಂತರ ಅವರ ನೆನಪಿಗಾಗಿ ಮೂರ್ತಿ ಪ್ರತಿಷ್ಠಾಪಿಸಿ ಮಾದರಿಯಾಗಿದ್ದಾರೆ.
ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಪೂಜಾರ ಕುಟುಂಬದ ಸಹೋದರರಾದ ಕೃಷ್ಣಪ್ಪ, ಬೆಟ್ಟದಪ್ಪ, ಹನುಮಂತಪ್ಪ ಹಾಗೂ ನಾಗರಾಜ ಸಹೋದರರು ತಮ್ಮ ತಂದೆ ತಿಮ್ಮಣ್ಣ ಪೂಜಾರ ಅವರು ಮೂರ್ತಿ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಮಾಡುತ್ತಿದ್ದಾರೆ. ಕೂಕನಪಳ್ಳಿ ಗ್ರಾಮದ ದೇವಸ್ಥಾನದ ಪೂಜಾರಿಯಾಗಿದ್ದ ತಿಮ್ಮಣ್ಣ ಪೂಜಾರ ಅವರು, ಬದುಕಿನ ಉದ್ದಕ್ಕೂ ಇತರರಿಗೆ ಒಳಿತನ್ನೇ ಬಯಸುತ್ತಾ ಬದುಕಿದವರು. ಅವರ ಒಳ್ಳೆತನದಿಂದಲೇ ನಮಗೂ ದೇವರು ಒಳ್ಳೆಯದನ್ನೇ ಮಾಡಿದ್ದಾನೆ. ಹಾಗಾಗಿ ನಮ್ಮ ತಂದೆ ನಮಗೆ ಸದಾ ಸ್ಮರಣೀಯ. ಅವರ ನೆನಪು ನಮ್ಮನ್ನು ಬಿಟ್ಟೂ ಬಿಡದೇ ಕಾಡುತ್ತಿದೆ. ಹಾಗಾಗಿ ಅವರ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿದೆವು ಎನ್ನುತ್ತಿದ್ದಾರೆ ಸಹೋದರರು.