ಗಂಗಾವತಿ (ಕೊಪ್ಪಳ):ಬಿಜೆಪಿರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅನುಮತಿ ಪಡೆದ ಅವಧಿ ಮುಗಿದಿದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭಾಷಣ ನಿಲ್ಲಿಸಿ ಕಾರ್ಯಕ್ರಮ ಮೊಟಕುಗೊಳಿಸಿದ ಘಟನೆ ಗಂಗಾವತಿ ತಾಲೂಕಿನ ಮರಳಿಯಲ್ಲಿ ನಡೆದಿದೆ.
ತಾಲೂಕಿನ ಮರಳಿ ಗ್ರಾಮದ ಬಳಿ ಇರುವ ಖಾಸಗಿ ರೆಸಾರ್ಟ್ನಲ್ಲಿ ಭಾನುವಾರ ಬಿಜೆಪಿಯ ಬಳ್ಳಾರಿ ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಬಳ್ಳಾರಿ ವಿಭಾಗ ವ್ಯಾಪ್ತಿಯ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು. ಸಭೆಯಲ್ಲಿ ನೆರೆದಿದ್ದ ಬಿಜೆಪಿಯ ಡಿಜಿಟಲ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿ ಎಲ್ ಸಂತೋಷ್, ಮುಂಬರುವ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾದ ಜವಾಬ್ದಾರಿ ಮತ್ತು ಆದ್ಯತಾ ಕೆಲಸಗಳೇನು ಎಂಬುದರ ಬಗ್ಗೆ ಮಾತನಾಡುತ್ತಿದ್ದರು.
ಆದರೆ, ಪಕ್ಷದಿಂದ ಪಡೆದುಕೊಂಡಿದ್ದ ಅನುಮತಿಯ ಅವಧಿ ಮುಗಿದ ಹಿನ್ನೆಲೆ ಸ್ಥಳದಲ್ಲಿದ್ದ ಅಧಿಕಾರಿಗಳು ತಕ್ಷಣ ವೇದಿಕೆಯತ್ತ ನುಗ್ಗಿ ಸಂತೋಷ್ ಅವರ ಭಾಷಣ ನಿಲ್ಲಿಸಲು ಹೇಳಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಮಧ್ಯೆ ವಾಗ್ವಾದ ನಡೆಯಿತು. ಇದನ್ನು ಗಮನಿಸುತ್ತಿದ್ದ ಸಮಾರಂಭದ ಕೇಂದ್ರ ಬಿಂದು ಬಿ ಎಲ್ ಸಂತೋಷ್ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಚುನಾವಣಾ ಅಧಿಕಾರಿಗಳು ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆ. ಒಂದೊಮ್ಮೆ ಅವಧಿ ಮೀರಿದ ಅಥವಾ ನೀತಿ ಸಂಹಿತೆ ಉಲ್ಲಂಘಿಸಿದ್ದರ ಆರೋಪವಿದ್ದರೆ ನನ್ನ ಮೇಲೆ ಕೇಸು ಹಾಕಿ ಎಂದು ವೇದಿಕೆಯಿಂದ ನಿರ್ಗಮಿಸಿದರು.