ಕೊಪ್ಪಳ:ಕಾಂಗ್ರೆಸ್ ಪಕ್ಷದಲ್ಲಿ ಹಿರಿತನಕ್ಕೆ ಬೆಲೆ ಇಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಅನುದಾನ ನೀಡಲೇ ಇಲ್ಲ. ಕ್ಷೇತ್ರದ ಜನರ ಒಟ್ಟು ಅಭಿಪ್ರಾಯದ ಮೇಲೆ ಪಕ್ಷಾಂತರ ಮಾಡಬೇಕಾಯಿತು ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಕನಕಗಿರಿಯಲ್ಲಿ ನಡೆದ ಐತಿಹಾಸಿಕ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಇಂದು ನಡೆದ ಗರುಡೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಾಪಗೌಡ ಪಾಟೀಲ್ ಅವರು, 2008 ರಿಂದ ನಾನು ಕನಕಗಿರಿಯ ಕನಕಾಚಲ ದೇವರ ಗರುಡೋತ್ಸವದಲ್ಲಿ ಭಾಗಿಯಾಗುತ್ತಿದ್ದೇನೆ. ನಾನು ರಾಜಕೀಯವಾಗಿ ಬೆಳೆಯಲು ಶ್ರೀ ಕನಕಾಚಲ ಲಕ್ಷ್ಮಿ ನರಸಿಂಹಸ್ವಾಮಿ ದೇವರ ಆಶೀರ್ವಾದ ಕಾರಣ. 2008 ರಲ್ಲಿ ಗರುಡೋತ್ಸವ ಮುಗಿಸಿ ಹೊರಬಂದಾಗ ನನಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು. ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರಬಹುದು ಅನ್ನೋ ಅನುಮಾನ ಇದೆ. ಈಗಾಗಲೇ ರಾಮುಲು, ವಿಜಯೇಂದ್ರ ಅವರು ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರ ಆರಂಭಿಸಿದ್ದಾರೆ ಎಂದರು.