ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಶುರುವಾಗಿದೆ ಕೆರೆಯ ಹೂಳೆತ್ತುವ ಪರ್ವ - ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿ

ಯಲಬುರ್ಗಾ ತಾಲೂಕಿನ ಕಲಭಾವಿ ಕೆರೆಯ ಹೂಳೆತ್ತುವ ಕಾಯಕಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.

ಕಲಭಾವಿ ಕೆರೆಯ ಹೂಳೆತ್ತುವ ಕಾರ್ಯ

By

Published : Feb 22, 2019, 11:30 AM IST

ಕೊಪ್ಪಳ: ಜಿಲ್ಲೆಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತುವ ಪರ್ವ ಶುರುವಾಗಿದೆ. ಯಲಬುರ್ಗಾ ತಾಲೂಕಿನ ಕಲಭಾವಿ ಕೆರೆಯ ಹೂಳೆತ್ತುವ ಕಾಯಕಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ವಿವಿಧ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಚಾಲನೆ ಸಿಕ್ಕಿದೆ.

ಹೌದು... ಕೆರೆಗಳನ್ನು ಉಳಿಸಿಕೊಂಡಾಗ ಮಾತ್ರ ನೀರು ಸಂಗ್ರಹಣೆ ಸಾಧ್ಯ ಎಂಬುದನ್ನು‌‌ ಮನಗಂಡ ಜನರು ಕೆರೆ ಹೂಳೆತ್ತುವ ಕೆಲಸಕ್ಕೆ ನಾಂದಿ ಹಾಡಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಹೂಳೆತ್ತುವ ಕೆಲಸದಿಂದ ಪ್ರೇರಣೆಗೊಂಡು ಈಗ ಕಲಭಾವಿಯ ಕೆರೆ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಒಟ್ಟು110 ಎಕರೆ ವಿಸ್ತಾರದ ಈ ಕೆರೆಯಲ್ಲಿ ಸದ್ಯಕ್ಕೆ ಈಗ ಸುಮಾರು 60 ಎಕರೆ ಪ್ರದೇಶದಲ್ಲಿ ಹೂಳೆತ್ತುವ ಯೋಜನೆಯನ್ನು ಕೈಗೊಳ್ಳಲಾಗಿದೆ. 30 ದಿನಗಳ ಕಾಲ ಕೆರೆ ಹೂಳೆತ್ತಲು ಯೋಜನೆ ರೂಪಿಸಲಾಗಿದ್ದು, ಎಲ್ಲವೂ ದಾನ, ದೇಣಿಗೆಯಿಂದ ಕೆಲಸ ನಡೆಯಲಿದೆ. ಕೆರೆ ಹೂಳೆತ್ತುವ ಈ ಕಾಯಕಕ್ಕೆ ಗವಿಮಠದ ಶ್ರೀಗಳು, ಚಿಕ್ಕೇನಕೊಪ್ಪದ ಚನ್ನವೀರ ಶರಣರು ಸೇರಿದಂತೆ ಅನೇಕರು ದೇಣಿಗೆ ನೀಡಿದ್ದಾರೆ.

ಕಲಭಾವಿ ಕೆರೆಯ ಹೂಳೆತ್ತುವ ಕಾರ್ಯ

ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ 5 ಲಕ್ಷ ರೂಪಾಯಿ ಹಾಗೂ ಹೂಳೆತ್ತುವ ಕೆಲಸಕ್ಕೆ ಹಿಟಾಚಿ, ಟಿಪ್ಪರ್ ನೀಡಿದ್ದಾರೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಸಹ 5 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಹೇಳಿದ್ದಾರೆ‌. ಹೀಗೆ ಸಾರ್ವಜನಿಕರು, ಉದ್ಯಮಿಗಳು, ಶಾಲಾ ವಿದ್ಯಾರ್ಥಿಗಳು ಸಹ ಈ ಪುಣ್ಯ ಕಾರ್ಯಕ್ಕೆ ದೇಣಿಗೆ ಸಲ್ಲಿಸಿದ್ದಾರೆ. ಇನ್ನೂ ಅನೇಕರು ವಾಹನಗಳನ್ನು ಕಳಿಸಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಇಲಾಖೆಯು ಕೈ ಜೋಡಿಸಿದ್ದು, ತಾಂತ್ರಿಕ ನೆರವು ಹಾಗೂ ಸಾರ್ವಜನಿಕರ ಬೆನ್ನಿಗಿರುವುದಾಗಿ ಘೋಷಣೆ ಮಾಡಿದೆ.

ಇದರಿಂದಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎರಡನೇಯ ಹೂಳೆತ್ತುವ ಕಾರ್ಯಕ್ಕೆ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ. ಕೆರೆ ಹೂಳೆತ್ತುವುದರಿಂದ ಮಳೆಯಾದ ಸಂದರ್ಭದಲ್ಲಿ ಕೆರೆ ತುಂಬಿ ನೀರಿನ ಬವಣೆ ನೀಗುವುದರ ಜೊತೆಗೆ ಕೆರೆ ಸುತ್ತಮುತ್ತಲ ಪ್ರದೇಶದ ಗ್ರಾಮಗಳ ಅಂತರ್ಜಲ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ. ಸಾರ್ವಜನಿಕರ ಈ ಶ್ರಮಕ್ಕೆ ನಿಸರ್ಗವೂ ಕರುಣೆ ತೋರಿದರೆ, ಅವರ ಶ್ರಮ ಸಾರ್ಥಕವಾಗುತ್ತದೆ.

ABOUT THE AUTHOR

...view details