ಕೊಪ್ಪಳ:ಬೇಸಿಗೆ ಬಂತೆಂದರೆ ಸಾಕು ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರಿನ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಇಲ್ಲೊಬ್ಬ ವ್ಯಕ್ತಿ ತಾನು ಕೆಲಸ ಮಾಡುವ ಪ್ರದೇಶದಲ್ಲಿ ಪಕ್ಷಿಗಳಿಗೆ ನೀರು ಹಾಗೂ ಕಾಳಿನ ವ್ಯವಸ್ಥೆ ಮಾಡುವ ಮೂಲಕ ಹಸಿವು ನೀರಡಿಕೆಯನ್ನು ಇಂಗಿಸಿ ಎಲ್ಲರಿಗೂ ಮಾದರಿಯಾಗುತ್ತಿದ್ದಾನೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.
ಪಕ್ಷಿಗಳಿಗೆ ನೀರು-ಆಹಾರ ಪೂರೈಕೆ ಇತ್ತೀಚಿನ ರಣ ಬಿಸಿಲು ಎಂಥವರನ್ನಾದರೂ ಕಂಗೆಡಿಸುತ್ತದೆ. ನೀರಿಗಾಗಿ ಮನುಷ್ಯರೇ ಬಾಯಾರಿಕೆಯಿಂದ ಬಳಲುತ್ತಾರೆ.ಜೀವಜಲವಿಲ್ಲದೇ, ಪಕ್ಷಿಗಳು ಬಾಯಾರಿಕೆ ಹಾಗೂ ಹಸಿವು ನೀಗಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿನ ಮರಗಳಲ್ಲಿ ನೀರು, ಕಾಳಿನ ವ್ಯವಸ್ಥೆ ಮಾಡುವ ಮೂಲಕ ಈ ನೌಕರ ಮತ್ತೊಬ್ಬರಿಗೆ ಮಾದರಿಯಾಗಿದ್ದಾನೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಚಾಲಕನಾಗಿರುವ ಸುಲ್ತಾನ್ ಸಾಬ್ ಎಂಬುವರು ಪಕ್ಷಿಗಳಿಗಾಗಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಕಳೆದ 9 ವರ್ಷಗಳಿಂದ ಅವರು ಪಕ್ಷಿಗಳಿಗಾಗಿ ಕುಡಿಯುವ ನೀರು, ಅವುಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಸುಲ್ತಾನ್ ಸಾಬ್ ಜಿಲ್ಲಾಡಳಿತ ಭವನದಲ್ಲಿರುವ ಮರದ ರೆಂಬೆ-ಕೊಂಬೆಗಳಿಗೆ ಸುಮಾರು 250ಕ್ಕೂ ಹೆಚ್ಚು ಪಾಟ್ಗಳನ್ನು ಕಟ್ಟಿದ್ದಾರೆ. ಅಲ್ಲದೇ ನಿತ್ಯವೂ ಅವುಗಳಲ್ಲಿ ನೀರು ತುಂಬಿಸಿ, ಆಹಾರ (ಕಾಳು, ಧಾನ್ಯ) ಹಾಕುವ ಮೂಲಕ ಪಕ್ಷಿಗಳ ಮೇಲೆ ವಿಶೇಷ ಕಾಳಜಿ ತೋರುತ್ತಿದ್ದಾರೆ.
ತಮ್ಮ ಕೆಲಸದ ಬಿಡುವಿನ ಅವಧಿಯಲ್ಲಿ ಮತ್ತು ಮುಂಜಾನೆ ವೇಳೆಯಲ್ಲಿ ಬಂದು ಪಾಟ್ಗಳಿಗೆ ನಿತ್ಯವೂ ನೀರು ಹಾಗೂ ಕಾಳುಗಳನ್ನು ಹಾಕುತ್ತಾರೆ. ಸುಲ್ತಾನ್ ಸಾಬ್ ಅವರ ಈ ಕಾಳಜಿಯಿಂದಾಗಿ ಜಿಲ್ಲಾಡಳಿ ಭವನದ ಆವರಣದಲ್ಲಿ ನಾನಾ ಬಗೆಯ ಪಕ್ಷಿಗಳು ಬಂದು ಆಹಾರ ತಿಂದು, ನೀರು ಕುಡಿಯುತ್ತವೆ.
ಪಕ್ಷಿಗಳಿಗೆ ನೀರು-ಆಹಾರ ಪೂರೈಕೆ ಸ್ವಂತ ಖರ್ಚಿನಲ್ಲಿಯೇ ಅವರು ಕಳೆದ 9 ವರ್ಷಗಳಿಂದ ಪಕ್ಷಿಗಳಿಗಾಗಿ ಮಾನವೀಯತೆಯ ಕೆಲಸ ಮಾಡುತ್ತಿದ್ದಾರೆ. ನಾವು ಮನುಷ್ಯರು. ಹಸಿವು ಬಾಯಾರಿಕೆಯಾದರೆ ಯಾರನ್ನಾದೂ ಕೇಳುತ್ತೇವೆ. ಆದರೆ, ಮೂಕ ಪ್ರಾಣಿ-ಪಕ್ಷಿಗಳು ಯಾರನ್ನು ಕೇಳಬೇಕು? ಅದರಲ್ಲೂ ಈ ಬೇಸಿಗೆ ಸಂದರ್ಭದಲ್ಲಿ ಪ್ರಾಣಿ-ಪಕ್ಷಿಗಳಿಗೆ ಆಹಾರದ ಕೊರತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ ಮನೆಯ ಮುಂದೆ, ಮಾಳಿಗೆ ಮೇಲೆ ಒಂದಿಷ್ಟು ಕಾಳು, ನೀರನ್ನು ಇಟ್ಟರೆ ಒಳ್ಳೆಯದು ಎಂದು ಮನವಿ ಮಾಡ್ತಾರೆ ಸುಲ್ತಾನ್ ಸಾಬ್.