ಗಂಗಾವತಿ(ಕೊಪ್ಪಳ):ಕನಕಗಿರಿ ತಾಲೂಕಿನ ಕಲಿಕೇರಿ ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಎಂದು ಸ್ಥಳ ಪರಿಶೀಲನೆ ಮಾಡುತ್ತಿದ್ದ ವೇಳೆ 12 ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿರುವ ಎರಡು ಶಿಲಾ ಶಾಸನಗಳು ಪತ್ತೆಯಾಗಿವೆ.
ಹಂಪೆ-ಕಮಲಾಪುರದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ ಆರ್ ಶೇಜೇಶ್ವರ ನೇತೃತ್ವದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆಂದು ಕಲಿಕೇರಿ ಗ್ರಾಮದಲ್ಲಿ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಶಿಲಾಶಾಸನಗಳು ಪತ್ತೆಯಾಗಿವೆ. ಗ್ರಾಮದ ಜೋಶಿ ಎಂಬುವರ ಜಮೀನಿನಲ್ಲಿರುವ ದೇವಾಲಯದಲ್ಲಿ ಅಸಂರಕ್ಷಿತ ಒಂದು ಶಾಸನ, ಮತ್ತೊಂದು ಗ್ರಾಮದ ರೈತ ತಳವಾರ ರಾಮಣ್ಣ ಎಂಬುವರಿಗೆ ಸೇರಿದ್ದ ಜಮೀನಿನಲ್ಲಿ ಶಿಲಾ ಶಾಸನ ಪತ್ತೆಯಾಗಿದೆ.
ಈ ವೇಳೆ, ಪುರಾತತ್ವ ಸಂಗ್ರಹಾಲಯ ಇಲಾಖೆಯ ಉಪನಿರ್ದೇಶಕ ಡಾ ಆರ್ ಶೇಜೇಶ್ವರ ಮಾತನಾಡಿ, ಗ್ರಾಮದಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಹುಡುಕುವ ಸಂದರ್ಭದಲ್ಲಿ ಎರಡು ಶಿಲಾ ಶಾಸನಗಳಿರುವುದು ಪತ್ತೆಯಾಗಿದೆ. ದೇವಾಲಯದಲ್ಲಿ ಅಸಂರಕ್ಷಿತವಾಗಿ ಬಿದ್ದಿದ್ದ ಒಂದು ಕಲ್ಲಿನ ಶಾಸನ ಇದು 35 ಸೆಂ.ಮೀ. ಉದ್ದ, 55 ಸೆಂ.ಮೀ. ಅಗಲವಾಗಿದೆ. ಈ ಶಾಸನವು ಹಳೆಗನ್ನಡದಲ್ಲಿದ್ದು, ಏಳು ಸಾಲುಗಳಿಂದ ಕೂಡಿದೆ. ಶಾಸನವು ಕಲ್ಯಾಣ ಚಾಲುಕ್ಯರ ಎರಡನೇ ಜಯಸಿಂಹನ ಕಾಲಾವಧಿಯದ್ದು ಆಗಿರಬಹುದು ಎಂದು ಊಹಿಸಲಾಗಿದೆ ಎಂದರು.