ಕೋಲಾರ: ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಮೇಲೆ ಜಿಲ್ಲೆಯ ಚಲುವನಹಳ್ಳಿ ಬಳಿ ಇಂದು ಬೆಳಗ್ಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸುಫಾರಿ ಕಿಲ್ಲರ್ ಬಾಲಾಜಿ ಸಿಂಗ್ ಬಲಗಾಲಿಗೆ ಮುಳುಬಾಗಿಲು ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಗುಂಡೇಟು ನೀಡಿದ್ದಾರೆ.
ಇತ್ತೀಚೆಗೆ ಕೋಲಾರ ಜಿಲ್ಲೆಯ ಮುಳುಬಾಗಿಲಿನ ಮುತ್ಯಾಲಪೇಟೆಯಲ್ಲಿ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆಯಾಗಿದ್ದು, ಆರೋಪಿಗಳನ್ನ ಬಂಧಿಸಲು ಕೋಲಾರ ಎಸ್ಪಿ ದೇವರಾಜ್ ವಿಶೇಷ ತಂಡ ರಚಿಸಿದ್ದರು. ಈ ಹಿನ್ನೆಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಸುಫಾರಿ ಕಿಲ್ಲರ್ ಬಾಲಾಜಿ ಸಿಂಗ್ನನ್ನ ಬಂಧಿಸಿ, ಇಂದು ಬೆಳಗ್ಗೆ ವಿಚಾರಣೆಗೆ ಕರೆದೊಯ್ಯಲಾಗುತ್ತಿತ್ತು.
ಸುಫಾರಿ ಕಿಲ್ಲರ್ ಕಾಲಿಗೆ ಗುಂಡೇಟು ಕೋಲಾರ ತಾಲೂಕಿನ ಚೆಲುವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಆರೋಪಿ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದರಿಂದ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅಲ್ಲದೇ, ಸ್ಥಳದಲ್ಲೇ ಇದ್ದ ದೊಣ್ಣೆಯಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ, ಮುಳುಬಾಗಿಲು ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಫೈರಿಂಗ್ ಮಾಡಿದ್ದಾರೆ.
ಮೊದಲು ಇನ್ಸ್‌ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಆದರೆ ಆರೋಪಿ ಪರಾರಿಯಾಗಲು ಯತ್ನಿಸಿದ್ದರಿಂದ ಬಲಗಾಲಿಗೆ ಗುಂಡು ಹಾರಿಸಲಾಗಿದೆ. ಬಾಲಾಜಿ ಸಿಂಗ್ನನ್ನ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಕೋಲಾರ ಎಸ್ಪಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಗುಜರಾತ್ ಗಲಭೆ 2002: ಎಸ್ಐಟಿ ಕ್ಲೀನ್ಚಿಟ್ ಎತ್ತಿಹಿಡಿದ ಸುಪ್ರೀಂ ಕೋರ್ಟ್... ಪಿಎಂ ಮೋದಿಗೆ ರಿಲೀಫ್