ಕೋಲಾರ:ಪೊಗರು ಚಿತ್ರದ ಪ್ರಮೋಷನ್ನಲ್ಲಿರುವ ಚಿತ್ರತಂಡ ಇದೀಗ ಕೋಲಾರಕ್ಕೆ ಭೇಟಿ ನೀಡಿದೆ. ಇಲ್ಲಿನ ಕೊಂಡರಾಜನಹಳ್ಳಿ ಬಳಿ ಇರುವ ಅಭಯ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದು, ಅಭಿಮಾನಿಗಳು, ಸಿನಿರಸಿಕರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಬಳಿಕ ಅಲ್ಲಿಂದ ನಾರಾಯಣಿ ಚಿತ್ರಮಂದಿರಕ್ಕೆ ಆಗಮಿಸಿದರು. ಈ ವೇಳೆ ಚಿತ್ರದ ನಾಯಕ ಧ್ರುವ ಸರ್ಜಾಗೆ ಪಟಾಕಿ ಸಿಡಿಸಿ, ಹೂವು ಮಳೆ ಸುರಿಸುವ ಮೂಲಕ ಭರ್ಜರಿಯಾಗಿ ಸ್ವಾಗತ ಕೋರಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಚಿತ್ರಮಂದಿರದ ಬಳಿ ಜಮಾಯಿಸಿದ್ದ ಅಭಿಮಾನಿಗಳು ನೆಚ್ಚಿನ ನಟನನ್ನ ನೋಡುವ ವೇಳೆ ನೂಕುನುಗ್ಗಲು ಏರ್ಪಟ್ಟಿತ್ತು. ಈ ವೇಳೆ ಧ್ರುವ ಸರ್ಜಾ ಅಭಿಮಾನಿಗಳನ್ನು ಚದುರಿಸಲು ಪೊಲೀಸರ ಹರಸಾಹಸ ಪಟ್ಟರು.
ಧ್ರುವ ಸರ್ಜಾಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಧ್ರುವ, ಬಹಳ ವರ್ಷಗಳ ನಂತರ ತೆಲುಗು-ತಮಿಳು ಪ್ರಭಾವವಿರುವ ಗಡಿ ಜಿಲ್ಲೆಗಳಲ್ಲೂ ಕನ್ನಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕೊರೊನಾ ನಂತರ ಚಿತ್ರಮಂದಿರಗಳು ಆರಂಭವಾಗಿದ್ದು, ಈ ಮೂಲಕ ಕೊರೊನಾಗೆ ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಕನ್ನಡ ಸಿನಿಮಾಗೆ ಇದೇ ರೀತಿ ಜನರ ಪ್ರೋತ್ಸಾಹ ಸಿಗಲಿ ಎಂದು ಮನವಿ ಮಾಡಿದರು.
ಅಲ್ಲದೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೋಲಾರ ಅವಳಿ ಜಿಲ್ಲೆಗಳಲ್ಲಿ ಹೆಚ್ಚು ಕಲೆಕ್ಷನ್ ಆಗಿದೆ. ಅಭಿಮಾನಿಗಳನ್ನು ಕಂಡು ಸಂತಸವಾಯ್ತು. ಮೂರು ವರ್ಷಗಳ ಬಳಿಕ ನನ್ನ ಫಿಲ್ಮ್ ಬಂದಿದೆ. ಕೊರೊನಾ ಸಮಯದಲ್ಲೂ ಸಿನಿಮಾ ನೋಡ್ತಿರೋದು ಖುಷಿ ಕೊಟ್ಟಿದೆ ಎಂದರು.
ಇದನ್ನೂ ಓದಿ:'ಪೊಗರು' ಚಿತ್ರದಲ್ಲಿ ತಾರಾ ಪಾತ್ರ ಏನು...ಎಷ್ಟು ದೃಶ್ಯಗಳಲ್ಲಿ ತಾರಾ ಇದ್ದಾರೆ...?