ಕರ್ನಾಟಕ

karnataka

ETV Bharat / state

ಮಗಳ ಸಂಸಾರಕ್ಕೆ ಕೊಳ್ಳಿ ಇಟ್ಟ ತಂದೆಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್​

ಪ್ರೀತಿಗಿಂದ ಮರ್ಯಾದೆನೇ ದೊಡ್ಡದಾಯ್ತು. ಕೆಳಜಾತಿಯ ಹುಡುಗನನ್ನು ಪ್ರೀತಿಸಿದ್ಲು ಅನ್ನೋ ಒಂದೇ ಒಂದು ಕಾರಣಕ್ಕೆ ಕೋಟ್ಯಧಿಪತಿ ತಂದೆ ಮಾಡಿದ್ದು ದೇವರು ಮೆಚ್ಚದ ಕೆಲಸ. ಮಗಳು ವಾಪಸು ಮನೆಗೆ ಬರ್ತಾಳೆ ಅನ್ನೋ ಭ್ರಮೆಯಲ್ಲಿ ಮುಳುಗಿದ್ದ ಆತ ಮುಂದೊಂದು ದಿನ ಪಾತಕದ ಕೆಲಸವನ್ನೇ ಮಾಡಿಬಿಟ್ಟ.

By

Published : Apr 26, 2019, 12:37 PM IST

ಮಗಳ ಸಂಸಾರಕ್ಕೆ ಕೊಳ್ಳಿ ಇಟ್ಟ ತಂದೆ

ಕೋಲಾರ: ಅದು ಹದಿಹರೆಯದ ಪ್ರೇಮ. ಜಾತಿ ಧರ್ಮದ ಬಂಧನ ಅಲ್ಲಿರಲಿಲ್ಲ. ಅಲ್ಲಿದ್ದಿದ್ದು ಪ್ರೀತಿ ಬಂಧವಷ್ಟೇ. ಆದ್ರೆ, ಕಾಕತಾಳೀಯವೋ ಏನೋ..ಅಲ್ಲಿದ್ದಿದ್ದು ಮೇಲುಜಾತಿಯ ಹುಡುಗಿ, ಕೆಳಜಾತಿಯ ಹುಡುಗ. ಪರಸ್ಪರ ಪ್ರೀತಿಸಿದ ಈ ಜೋಡಿ ಪುಟ್ಟದೊಂದು ಸಂಸಾರ ಕಟ್ಟಿಕೊಂಡು ಒಬ್ಬರಿಗೊಬ್ಬರು ಬದುಕಿಗಾಸರೆಯಾಗಿದ್ದರು. ಆದ್ರೆ, ಮನುಷ್ಯನ ಕ್ರೌರ್ಯ ಅದನ್ನು ಸಹಿಸಲಿಲ್ಲ. ಮಗಳ ಸುಂದರ ಬದುಕನ್ನು ನೋಡಿ ಕುರುಬಿದ ಕೋಟ್ಯಾಧಿಪತಿ ತಂದೆ ಪ್ರೀತಿಯ ಮೊಗ್ಗನ್ನು ಚಿವುಟಿ ಹಾಕಿದ್ದಾನೆ.

ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಗಳನ್ನು ನರಕಕ್ಕೆ ದೂಕಿದ ತಂದೆ

ಅಷ್ಟಕ್ಕೂ ಈ ಪ್ರಕರಣವನ್ನೂ ಡಿಟೇಲ್‌ ಆಗಿ ಹೇಳ್ತೀವಿ ನೋಡಿ. ಇದು 2013ರಲ್ಲಿ ನಡೆದ ಘಟನೆ. ಅಂದರೆ, 6 ವರ್ಷಗಳ ಹಿಂದಿನ ಸ್ಟೋರಿ. ಆ ವರ್ಷ ನವಂಬರ್​ 7ರಂದು ಹೊಸಕೋಟೆ ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ರಾಮಚಂದ್ರ ಎಂಬ ಯುವಕ, ಕಲ್ಯಾಣ ನಗರದ ಬಾಬುರೆಡ್ಡಿ ಎಂಬುವರ ಮಗಳು ಚೈತ್ರಾಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆದ್ರೆ, ಈ ವಿವಾಹಕ್ಕೆ ಚೈತ್ರಾಳ ತಂದೆ ಬಾಬು ರೆಡ್ಡಿ ಸುತರಾಂ ಒಪ್ಪಿರಲಿಲ್ಲ. ರಾಮಚಂದ್ರನ ಕೈ ಹಿಡಿದ ಚೈತ್ರಾಳ ಸಣ್ಣ ಸಂಸಾರ ಸುಖವಾಗಿಯೇ ಸಾಗುತ್ತಿತ್ತು. ಆದ್ರೆ, ತಂದೆಯ ಕೋಪ ಮಾತ್ರ ತಣ್ಣಗಾಗಿರಲಿಲ್ಲ. ಸೂಕ್ತ ಸಮಯ, ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ಆತ ಕೊನೆಗೊಂದಿನ ಮಗಳನ್ನು ವರಿಸಿದ ರಾಮಚಂದ್ರನನ್ನೇ ಕೊಲೆ ಮಾಡಿಸಿದ್ದಾನೆ.

ಮಗಳ ಸಂಸಾರಕ್ಕೆ ಕೊಳ್ಳಿ ಇಟ್ಟ ತಂದೆ

ಮಗಳು ಪ್ರೀತಿಸಿದಾತನನ್ನೇ ಕೊಲೆ ಮಾಡಿಸಿದರೆ ಮತ್ತೆ ನನ್ನ ಮಗಳು ನನ್ನ ಮನೆಗೆ ಬರ್ತಾಳೆ ಎಂಬ ಸ್ವಾರ್ಥವೋ, ಅಥವಾ ಬೇರೆ ಜಾತಿಯವನನ್ನು ಮದುವೆಯಾಗಿ ಮರ್ಯಾದೆ ಹೋಯ್ತು ಎಂಬ ದ್ವೇಷಕ್ಕೋ ಆತ ತನ್ನ ಮಗಳ ಗಂಡನ ಪ್ರಾಣ ತೆಗೆದ. ತನ್ನ ಪರಿಚಯಸ್ಥ ಯಲ್ಲಪ್ಪ, ಅಂಬರೀಶ್​, ಸುರೇಶ್​, ಅಶೋಕ್​, ಸುನೀಲ್​ ಕುಮಾರ್​, ಮುನಿರಾಜು ಎಂಬುವರಿಗೆ ಅಳಿಯ ರಾಮಚಂದ್ರನ ಕೊಲೆಗೆ 10 ಲಕ್ಷ ರೂಪಾಯಿ ಸುಪಾರಿ ನೀಡಿದ್ದ. ಸುಪಾರಿ ಪಡೆದವರು 2015 ರ ಫೆಬ್ರವರಿ 10 ರಂದು ಆಟೋ ಓಡಿಸುತ್ತಿದ್ದ ರಾಮಚಂದ್ರನನ್ನು ಬಾಡಿಗೆ ನೆಪದಲ್ಲಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತ್ಯಾರನಹಳ್ಳಿಗೆ ಕರೆತಂದು, ನೀಲಗಿರಿ ತೋಪಿನಲ್ಲಿ ಟಾಟಾ ಏಸ್​ ವಾಹನದಲ್ಲಿ ರಾಮಚಂದ್ರನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬಂಗಾರಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋಲಾರದ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್​.ರೇಖಾ ಸುಧೀರ್ಘವಾದ ವಾದ, ಪ್ರತಿವಾದ ಆಲಿಸಿ ಕೊಲೆ ಮಾಡಲು ಸುಪಾರಿಕೊಟ್ಟಿದ್ದ ಆರೋಪಿ ತಂದೆ ರವೀಂದ್ರಬಾಬು ಆಲಿಯಾಸ್​ ಬಾಬುರೆಡ್ಡಿ ಹಾಗೂ ಸುಪಾರಿ ಪಡೆದು ಕೊಲೆಗೈದ ಒಟ್ಟು ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದರು.

ಒಟ್ಟಾರೆ ಮಗಳ ಸಂಸಾರ, ಸಂತೋಷಕ್ಕಿಂತ ತನ್ನ ಮರ್ಯಾದೆಯೇ ಹೆಚ್ಚು ಎಂದುಕೊಂಡ ತಂದೆಗೆ ಇಂದು ನ್ಯಾಯಾಲಯ ತಕ್ಕ ಪಾಠ ಕಲಿಸಿದೆ. ಅತ್ತ ಮರ್ಯಾದೆಯೂ ಇಲ್ಲದೆ, ಇತ್ತ ಮಗಳ ಸಂಸಾರವು ಸರಿ ಮಾಡಲಾಗದೇ, ತನ್ನದೇ ಪ್ರೀತಿಯಲ್ಲಿ ಪುಟ್ಟದೊಂದು ಸಂಸಾರ ಕಟ್ಟಿಕೊಳ್ಳಬೇಕು ಎಂದು ಕನಸು ಕಂಡಿದ್ದ ಪ್ರೀತಿ ಹಕ್ಕಿಗಳ ಕಣ್ಣೀರಿನ ಶಾಪಕ್ಕೆ ಪಾಪಿ ತಂದೆ ಜೈಲುಪಾಲಾದ!.

ABOUT THE AUTHOR

...view details