ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರಿನಲ್ಲಿ ಸುಮಾರು ಐದು ವರ್ಷಗಳಿಂದ ಹಣ್ಣಿನ ಮರಗಳನ್ನು ಅದರಲ್ಲೂ ಕಾಡು ಹಣ್ಣಿನ ಮರಗಳನ್ನು ಬೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ವರ್ಷಪೂರ್ತಿ ತಮಗೆ ಮನೆಗಳಲ್ಲಿ ಸಿಗುವ ಹಣ್ಣಿನ ಬೀಜಗಳನ್ನು ತಂದು ಶಿಕ್ಷಕ ಸತೀಶ್ ಶಾಲೆಯಲ್ಲಿ ಸ್ಥಾಪಿಸಿರುವ ಬೀಜ ಭಂಡಾರದಲ್ಲಿ ಸಂಗ್ರಹಿಸುತ್ತಾರೆ.
ಹೀಗೆ ಸಂಗ್ರಹಿಸಲಾದ ಬೀಜಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಣ್ಣಿನೊಂದಿಗೆ ಸೇರಿಸಿ ಬೀಜದ ಉಂಡೆಗಳನ್ನಾಗಿ ಮಾಡಲಾಗುತ್ತದೆ. ಬಳಿಕ ಜೂನ್ ತಿಂಗಳಿನಲ್ಲಿ ಮಳೆಬೀಳುವ ಸಮಯವನ್ನು ನೋಡಿಕೊಂಡು ಎರಡು ಅಥವಾ ಮೂರನೇ ವಾರದಲ್ಲಿ ಅವುಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗುತ್ತಾರೆ.
ಇನ್ನು ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮೀಪದ ಅರಣ್ಯಕ್ಕೆ ತೆರಳಿ ಬೀಜದ ಉಂಡೆಗಳನ್ನು ಅರಣ್ಯದಲ್ಲಿ ಬಿತ್ತುವ ಕೆಲಸ ಮಾಡಿದರು. ಕೊಡಗಿನ ಅರಣ್ಯಗಳಲ್ಲಿ ಬೈನೆಮರಗಳು ಬಿದಿರು ಅಡಕೆ ತೆಂಗು ಕಾಡು ಬಾಳೆಗಳನ್ನು ಯಥೇಚ್ಛವಾಗಿ ಬೆಳೆಯುವ ಕಾರ್ಯಕ್ರಮಗಳು ನಡೆದರೆ ಕಾಡಿನಿಂದ ನಾಡಿಗೆ ಬರುತ್ತಿರುವ ಆನೆಗಳ ಹಾವಳಿಗಳನ್ನು ತಪ್ಪಿಸಿ ಮಾನವ ಮತ್ತು ಆನೆಯ ಸಂಘರ್ಷ ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೊಡಗಿನ ಅರಣ್ಯಗಳಲ್ಲಿ ಅತಿ ಅವಶ್ಯಕವಾಗಿ ಆನೆಗೆ ಬೇಕಾದ ಆಹಾರ ವಸ್ತುಗಳನ್ನು ಬೆಳೆಯುವ ಕೆಲಸ ಆಗಬೇಕಾಗಿದೆ ಎಂದು ಶಿಕ್ಷಕ ಸತೀಶ್ ತಿಳಿಸಿದ್ದಾರೆ.
ಪರಿಸರ ಸಂರಕ್ಷಣಾ ಕಾರ್ಯ ಕುರಿತು ಶಿಕ್ಷಕ ಸತೀಶ್ ಮಾತನಾಡಿ, ಇಲ್ಲಿ ನಾವು ಸುಮಾರು 5 ವರ್ಷಗಳಿಂದ ಫಲವೃಕ್ಷ ಕಾಂತ್ರಿ ಹಣ್ಣಿನ ಮರಗಳ ಬೀಜವನ್ನು ಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದೇವೆ. ವಾಣಿಜ್ಯ ಉದ್ದೇಶದ ಮರಗಳನ್ನು ಬೆಳೆಸುವುದಕ್ಕಿಂತ, ಹಣ್ಣಿನ ಮರಗಳನ್ನು ಬೆಳೆಸುವುದರಿಂದ ತನ್ನಿಂದ ತಾನೇ ಅರಣ್ಯ ಮರಗಳು ವೇಗವಾಗಿ ವೃದ್ಧಿಯಾಗುತ್ತದೆ. ಹೇಗೆಂದರೆ ಇವುಗಳನ್ನು ತಿಂದ ಪಕ್ಷಿಗಳು, ಹಿಕ್ಕೆಗಳನ್ನು ಹಾಕಿದಾಗ ಅಲ್ಲಿ ಮತ್ತೆ ಹೊಸ ಹಣ್ಣಿನ ಮರಗಳು ಉತ್ಪತ್ತಿಯಾಗುತ್ತದೆ.
ಇದು ತನ್ನಿಂದ ತಾನೇ ಹರಡುತ್ತಾ ಹೋಗುತ್ತದೆ. ಜೀವ ಸಂಕುಲಗಳಿಗೆ ಆಹಾರ ಕೂಡ ಸಿಗುತ್ತದೆ. ಕೊಡಗಿನಲ್ಲಿ ಬಹುಮುಖ್ಯ ಸಮಸ್ಯೆ ಅಂದರೆ ಆನೆ ಮತ್ತು ಮಾನವನ ನಡುವಿನ ಸಂಘರ್ಷ ನಿರಂತರವಾಗಿ ನಡೆಯುತ್ತಾ ಬರುತ್ತದೆ. ಹೀಗಾಗಿ ಕೊಡಗು ಪ್ರದೇಶಗಳಲ್ಲಿ ನಾವು ಹೆಚ್ಚು ಹೆಚ್ಚು ಬೈನೇ ಮರಗಳು, ಅಡಿಕೆ, ಕಂಗು, ಕಾಡು ಬಾಳೆ, ಹಲಸು, ಹೆಬ್ಬಲಸು ಈ ರೀತಿ ಹೆಚ್ಚು ಹಣ್ಣಿನ ಮರಗಳನ್ನು ನಾವು ಬೆಳೆಸುತ್ತಾ ಹೋದಂತೆ ಆನೆಗಳಿಗೆ ಆಹಾರ ಸಿಕ್ಕಿ , ಆನೆಗಳು ಕಾಡಿನಿಂದ ನಾಡಿಗೆ ಬರುವುದು ತಪ್ಪಿಸಬಹುದು ಎಂದು ಸತೀಶ್ ವಿವರಿಸಿದರು.
ನಮ್ಮ ಈ ಕಾರ್ಯಕ್ಕೆ ಅರಣ್ಯ ಸಿಬ್ಬಂದಿಯವರು ಕೂಡ ಸಹಕಾರ ನೀಡಿದ್ದಾರೆ. ನಾವು ಬರೀ ಬೀಜ ಬಿತ್ತನೆ ಮಾಡಿ ಬರುವಂಥದ್ದಲ್ಲ. ಅದನ್ನು ನೋಡಿಕೊಳ್ಳವಂತಹ ಕೆಲಸ ಕೂಡ ಮಾಡಬೇಕಾಗತ್ತದೆ. ಆಗ ಈ ರೀತಿಯ ಕಾರ್ಯಗಳು ಹೆಚ್ಚು ಫಲ ಕೊಡುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಕೊಡಗು: ರಾಜಾಸೀಟ್ ಉದ್ಯಾನದ ಸೆಕ್ಯೂರಿಟಿ ಗಾರ್ಡ್ ಮೇಲೆ ವ್ಯಾಪಾರಸ್ಥನಿಂದ ಹಲ್ಲೆ