ಕೊಡಗು:ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸೋಂಕಿತರ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಸೋಂಕು ಹರಡುವಿಕೆಗೆ ವಿದೇಶ, ಹೊರ ರಾಜ್ಯ, ಹೊರ ಜಿಲ್ಲೆಗಳ ಪ್ರಯಾಣಿಕರು ಪ್ರಮುಖ ಕಾರಣ ಎಂಬುದು ಕಂಡು ಬಂದಿದೆ.
ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಾದಲ್ಲಿ ಹಲವು ಮಂದಿ ಜಿಲ್ಲೆಗೆ ಆಗಮಿಸುವ ಸಾಧ್ಯತೆಗಳಿವೆ. ಸಾರ್ವಜನಿಕರ ಹಿತಾಸಕ್ತಿಯಿಂದ ಜಿಲ್ಲೆಯಲ್ಲಿ ಕೆಲವು ಸಂಪರ್ಕ ತಡೆ ನಿಯಮಗಳನ್ನು ರೂಪಿಸಲಾಗಿದೆ.
ವಿದೇಶದಿಂದ ಬರುವವರು ಕಡ್ಡಾಯವಾಗಿ 7 ದಿನಗಳು ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನಗಳು ಗೃಹ ಕ್ವಾರಂಟೈನ್ನಲ್ಲಿ ಇರಬೇಕಿದೆ. ಹೊರ ರಾಜ್ಯದಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳು ಗೃಹ ಕ್ವಾರಂಟೈನ್ ನಲ್ಲಿ ಇರಬೇಕು. ಹಾಗೆಯೇ ಹೊರ ಜಿಲ್ಲೆಗಳಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್ನಲ್ಲಿ ಇರಬೇಕು. ಕ್ವಾರಂಟೈನ್ನಲ್ಲಿ ಇರುವವರಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಸ್ಥಳೀಯ ಕಾರ್ಯವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಸ್ಥಳೀಯ ಕಾರ್ಯ ವ್ಯಾಪ್ತಿಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಈಗಾಗಲೇ ಜನ ಪ್ರತಿನಿಧಿಗಳನ್ನು ಒಳಗೊಂಡಂತೆ ರಚಿಸಿರುವ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ, ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿ ಮೇಲಿನ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ನಿಗಾ ವಹಿಸಬೇಕಿದೆ. ತುರ್ತು, ಅನಿವಾರ್ಯ, ವೈದ್ಯಕೀಯ ಹಿನ್ನಲೆಯಲ್ಲಿ ಆಗಮಿಸಿದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ, ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಯು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ನಿಯಮ ಉಲ್ಲಂಘನೆ ಆಗುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಯವ್ಯಾಪ್ತಿಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಥವಾ ಜನಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಅಥವಾ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಗೆ ಮಾಹಿತಿ ಕೊಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.