ಕೊಡಗು : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜನತೆ ಜೀವನ ಸಾಗಿಸೋದೆ ಕಷ್ಟಕರವಾಗಿದೆ. ಬೆಳಗಾದರೆ ಸಾಕು ಆನೆಹಾವಳಿ, ಹುಲಿ ಹಾವಳಿಯಿಂದ ಜಿಲ್ಲೆಯ ಜನ ರೋಸಿ ಹೋಗಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವ ಕಾಡು ಪ್ರಾಣಿಗಳು ಇತ್ತ ಫಸಲು ಇಲ್ಲದೆ ರೈತರು ಕಂಗಾಲಾಗಿ ಹೋಗಿದ್ದಾರೆ.
ದಕ್ಷಿಣ ಕೊಡಗಿನಲ್ಲಂತೂ ಆನೆ ಹಾವಳಿ ಮಿತಿ ಮೀರಿದ್ದು, ಮನುಷ್ಯರನ್ನು ಕಾಡಾನೆಗಳು ಬಲಿ ಪಡೆದುಕೊಳ್ಳುತ್ತಲೇ ಇವೆ. ನಿನ್ನೆ ದಿನ ಕೂಡ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಎಂಬಲ್ಲಿ ತೋಟಕ್ಕೆ ಹೋಗುತ್ತಿದ್ದ 58 ವರ್ಷದ ಹಾಲಪ್ಪ ಎಂಬುವರ ಮೇಲೆ ಆನೆ ದಾಳಿ ನಡೆಸಿದೆ. ಅದೃಷ್ಟವಶಾತ್ ಹಾಲಪ್ಪ ಪ್ರಾಣಪಾಯದಿಂದ ಪಾರಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದರೆ ಇಂದು ಮುಂಜಾನೆ ಆನೆ ದಾಳಿಗೆ ಓರ್ವ ಮೃತಪಟ್ಟಿದ್ದಾನೆ. ಜಿಲ್ಲೆಯ ಗೋಣಿಕೊಪ್ಪ ಸಮೀಪದ ದನುಗಾಲ ಮಾರಮ್ಮ ಕಾಲೋನಿ ನಿವಾಸಿ ಚಾಮ (50) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಕೋಣನ ಕಟ್ಟೆಯಿಂದ ಮೂವರು ಮರಪಾಲ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುವಾಗ ಪಕ್ಕದ ಕಾಫಿ ತೋಟದಿಂದ ಬಂದ ಕಾಡಾನೆ ಇವರ ಮೇಲೆ ದಾಳಿ ಮಾಡಿದೆ. ಮುಂಜಾನೆ ಹೊತ್ತಿನಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದ್ದು, ಒಬ್ಬರು ಮೃತಪಟ್ಟರೆ, ಇಬ್ಬರು ತಪ್ಪಿಸಿಕೊಂಡಿದ್ದಾರೆ.