ಕೊಡಗು: ಮೈಸೂರು-ಕೊಡಗು ಜಿಲ್ಲೆಗಳ ಗಡಿ ಹಾಗೂ ಪ್ರವೇಶದ್ವಾರ ಪಟ್ಟಣದ ಅರಣ್ಯ ತಪಾಸಣಾ ಗೇಟ್ ಬಳಿ ಬಿಗಿ ಬಂದೋಬಸ್ತ್ ಹಾಗೂ ಆರೋಗ್ಯ ತಪಾಸಣೆ ವ್ಯವಸ್ಥೆಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಪರಿಶೀಲಿಸಿದರು.
ಜಿಲ್ಲೆ ಹಸಿರು ವಲಯವಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕೆ ಜಿಲ್ಲೆಯಿಂದ ಹೊರಗೆ ತೆರಳುವವರ ಮತ್ತು ಆಗಮಿಸುವವರ ಸಂಖ್ಯೆ ಪ್ರತಿನಿತ್ಯ ಗಣನೀಯವಾಗಿ ಹೆಚ್ಚುತ್ತಿದೆ. ಜಿಲ್ಲೆಗೆ ಆಗಮಿಸುವ, ಮತ್ತು ಜಿಲ್ಲೆಯಿಂದ ತೆರಳುವವರ ಬಗ್ಗೆ ಪೊಲೀಸ್ ಇಲಾಖೆಯಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ಕೋವಿಡ್ 19 ತಪಾಸಣಾ ಕೇಂದ್ರದಲ್ಲಿ ವಲಸಿಗರ ಆರೋಗ್ಯ ತಪಾಸಣೆ ಕಾರ್ಯ ಕೈಗೊಳ್ಳಲಾಗಿದೆ. ಇತರೆಡೆಗಳಿಂದ ಜಿಲ್ಲೆಗೆ ಆಗಮಿಸುವವರನ್ನು ಥರ್ಮಲ್ ಸ್ಕ್ಯಾನ್ಗೆ ಒಳಪಡಿಸಿ ಉಷ್ಣಾಂಶ ತಪಾಸಣೆ ಮಾಡಿ ಸೀಲ್ ಹಾಕುವ ಮೂಲಕ ಹೋಂ ಕ್ಯಾರಂಟೈನ್ಗೆ ಒಳಪಡಿಸಲಾಗುತ್ತಿದೆ.
ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಈ ಎರಡೂ ಸ್ಥಳದಲ್ಲಿ ಶಾಸಕ ಅಪ್ಪಚ್ಚು ರಂಜನ್ ದಾಖಲೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ತಪಾಸಣಾ ನಿರತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜ್ಯೂಸ್ ವಿತರಣೆ ಮಾಡಿದರು.
ಕೊಡಗು ಜಿಲ್ಲೆ ಗ್ರೀನ್ ಜೋನ್ನಲ್ಲಿರುವ ಕಾರಣ ಮತ್ತಷ್ಟು ಎಚ್ಚರವಹಿಸುವುದು ಅಗತ್ಯ. ಜಿಲ್ಲೆಗೆ ಪ್ರತಿದಿನ ಕುಶಾಲನಗರ ಮತ್ತು ಸಂಪಾಜೆ ಗಡಿ ಗೇಟ್ ಮೂಲಕ ನೂರಾರು ಮಂದಿ ಪ್ರವೇಶಿಸುತ್ತಿದ್ದಾರೆ. ಸುಮಾರು 3 ಸಾವಿರ ಮಂದಿ ಜಿಲ್ಲೆಗೆ ಆಗಮಿಸುವ ಬಗ್ಗೆ ಜಿಲ್ಲಾಡಳಿತದ ನಿರೀಕ್ಷೆಯಿದೆ. ಬಂದವರನ್ನು ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.