ಕೊಡಗು:ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಾಪೋಕ್ಲುವಿನಿಂದ ಮೂರ್ನಾಡು ಸಂಪರ್ಕ ಕಲ್ಪಿಸುವ ಬೊಳಿಬಾಣೆ ಎಂಬಲ್ಲಿ ರಸ್ತೆಯಲ್ಲಿ 5 ಅಡಿಗಳಷ್ಟು ಪ್ರವಾಹ ಹೆಚ್ಚಾಗಿದೆ.
ಕೊಟ್ಟಮುಡಿ ಜಂಕ್ಷನ್ ಬಳಿಯಲ್ಲಿ ಕಾಫಿ ತೋಟಗಳಿಗೆ ಕಾವೇರಿ ನದಿ ನೀರಿನ ಪ್ರವಾಹ ಬಂದಿದೆ. ಕೇವಲ 3ರಿಂದ 4 ಅಡಿಗಳಷ್ಟು ಪ್ರವಾಹ ಬಂದರೆ ನಾಪೋಕ್ಲು ಮಾರ್ಗವಾಗಿ ಕೊಟ್ಟಮುಡಿ ಮಡಿಕೇರಿ ಸಂಪರ್ಕಿಸುವ ಮುಖ್ಯರಸ್ತೆ ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಚೆರಿಯಪರಂಬು- ಕಲ್ಲುಮೊಟ್ಟೆ ಹೋಗುವ ರಸ್ತೆಯಲ್ಲೂ ಕಾವೇರಿ ನದಿ ಪ್ರವಾಹ ಹೆಚ್ಚಳವಾಗಿದ್ದು, ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಮೈದಾನ ಜಲಾವೃತಗೊಂಡಿದೆ. ಈ ಗ್ರಾಮದ ರಸ್ತೆಗಳಲ್ಲಿ ಸುಮಾರು 6 ಅಡಿಗಳಷ್ಟು ಪ್ರವಾಹ ಬಂದಿದ್ದು, ಪ್ರವಾಹ ಮತ್ತಷ್ಟು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ನಾಲ್ಕುನಾಡು ವ್ಯಾಪ್ತಿಗೆ ಒಳಪಡುವ ಕಕ್ಕಬ್ಬೆ ಗ್ರಾಮ ವ್ಯಾಪ್ತಿಯ ಫೈನರಿ ದರ್ಗಾಕ್ಕೆ ಹೋಗುವ ರಸ್ತೆ, ಎಮ್ಮೆಮಾಡು -ಕೂರುಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಕೈಕಾಡು, ಪಾರಾಣೆ ಸಂಪರ್ಕಿಸುವ ಎತ್ತುಕಡು ರಸ್ತೆ ಹಾಗೂ ಸಮೀಪದ ಎಡಪಾಲ ಕಡಂಗ ಮಾರ್ಗವಾಗಿ ವಿರಾಜಪೇಟೆ ಹೋಗುವ ರಸ್ತೆಯ ಅರಪಟ್ಟು ಎಂಬಲ್ಲಿ ರಸ್ತೆ ಮೇಲೆ ನದಿ ಪ್ರವಾಹ ಬಂದು, ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.