ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ನಿವೃತ್ತ ಎಸ್ಪಿ ಪುತ್ರನಿಂದ ವರ್ತಕನ ಮೇಲೆ ಫೈರಿಂಗ್ ಕೊಡಗು: ಜಿಲ್ಲೆಯಲ್ಲಿ ಮತ್ತೆ ಗುಂಡಿನ ದಾಳಿ ಪ್ರಕರಣ ನಡೆದಿದೆ. ಜಿಲ್ಲೆಯ ವಿರಾಜ್ ಪೇಟೆ ತಾಲೂಕಿನ ಅಮ್ಮತಿಯಲ್ಲಿ ನಿವೃತ್ತ ಎಸ್ಪಿ ಅವರ ಪುತ್ರನಿಂದ ವರ್ತಕನ ಮೇಲೆ ಗುಂಡಿನ ದಾಳಿ ನಡೆದಿದೆ. ವರ್ತಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲ್ಲಮಕ್ಜಡ ರಂಜನ್ ಚಿನ್ನಪ್ಪ ಎಂಬಾತ ಗುಂಡು ಹಾರಿಸಿದ ವ್ಯಕ್ತಿ. ಸಿದ್ದಾಪುರ ರಸ್ತೆಯ ವರ್ತಕ ಕೆ ಬೋಪಣ್ಣನ ಮೇಲೆ ರಿವಾಲ್ವಾರ್ನಿಂದ ಎರಡು ಸುತ್ತು ಗುಂಡು ಹಾರಿಸಿದ್ದು, ಕೂದಲೆಳೆ ಅಂತರದಿಂದ ಬೋಪಣ್ಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಂಜನ್ ಅವರ ಮನೆಯ ಮುಂಭಾಗ ರಂಜನ್ಗೆ ಸೇರಿದ ಅಂಗಡಿ ಮಳಿಗೆಯನ್ನು ಬಾಡಿಗೆಗೆ ತೆಗೆದುಕೊಂಡಿರುವ ಬೋಪಣ್ಣ ಮತ್ತು ಅವರ ಪಾಲುದಾರ ಅಡಿಕೆ ಮಂಡಿಯನ್ನು ನಡೆಸುತ್ತಿದ್ದಾರೆ. ಈ ಅಂಗಡಿ ಮಳಿಗೆಯನ್ನು ಖಾಲಿ ಮಾಡುವಂತೆ ಈ ಹಿಂದೆ ರಂಜನ್ ಸೂಚಿಸಿದ್ದರು. ಬೋಪಣ್ಣ ಸಮಯಾವಕಾಶವನ್ನು ಕೇಳಿದ್ದರು. ಇಂದು ಮತ್ತೆ ಪುನಃ ರಂಜನ್ ಚಿನ್ನಪ್ಪ, ಬೋಪಣ್ಣ ಅವರ ಅಂಗಡಿಗೆ ತೆರಳಿ ಖಾಲಿ ಮಾಡುವಂತೆ ಕೇಳಿಕೊಂಡಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಂಜನ್ ತನ್ನ ಬಳಿ ಇದ್ದ ರಿವಾಲ್ವಾರ್ನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ. ನಂತರ ರಂಜನ್ ಮೇಲೆ ಹಲ್ಲೆ ಕೂಡ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ರಾಜನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಂಡು ಹಾರಿಸಿದ ಆರೋಪಿಯನ್ನು ಬಂಧಿಸಿದ್ದು, ಗುಂಡು ಹಾರಿಸಿರುವ ರಿವಾಲ್ವಾರ್ ಅನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಎಸ್ ಪಿ ರಾಮ್ ರಾಜನ್ ಮಾಹಿತಿ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ರಾಮ್ ರಾಜನ್, ಇಂದು ಬೆಳಗ್ಗೆ ತಮ್ಮ ಮಳಿಗೆಯಲ್ಲಿ ಬಾಡಿಗೆಗಿದ್ದು, ವ್ಯಾಪಾರ ನಡೆಸುತ್ತಿದ್ದ ಬೋಪಣ್ಣ ಅವರ ಮೇಲೆ ರಂಜನ್ ಚಿನ್ನಪ್ಪ ಎಂಬುವರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಬೋಪಣ್ಣ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಆರೋಪಿಯನ್ನು ತಕ್ಷಣವೇ ಬಂಧಿಸಿದ್ದು, ರಿವಾಲ್ವಾರ್ ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ. ಆರೋಪಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಆರೋಪಿಯ ತಂದೆ ನಿವೃತ್ತ ಎಸ್ಪಿಯಾಗಿದ್ದು, ಅವರ ಸರ್ವಿಸ್ ರೈಫಲ್ನಲ್ಲೇ ಈ ಕೃತ್ಯ ಜರುಗಿದೆ ಎಂದು ಕೇಳಿ ಬರುತ್ತಿರುವ ಮಾತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಿವಾಲ್ವಾರ್ ಕಾನೂನುಬದ್ಧವಾಗಿ ಇಟ್ಟುಕೊಂಡಿದ್ದಾರಾ ಅಥವಾ ಅವರ ತಂದೆಯ ರಿವಾಲ್ವಾರ್ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಬೇರೆ ಯಾವುದಾದರೂ ಆಯುಧಗಳನ್ನು ಇಟ್ಟುಕೊಂಡಿದ್ದಾರಾ ಎಂದು ಅವರ ಮನೆಯನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
"ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕ್ರಿಮಿನಲ್ ಅಪರಾಧಿಗಳು, ಕ್ರಿಮಿನಲ್ ಇತಿಹಾಸ ಇರುವವರ ಆಯುಧ, ಶಸ್ತ್ರಾಸ್ತ್ರಗಳನ್ನು ಮಾತ್ರ ಪೊಲೀಸರಿಗೆ ಒಪ್ಪಿಸುವಂತೆ ಹೇಳಲಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಆದೇಶ ಹೊರಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ 41 ಸಾವಿರ ವೆಪನ್ಸ್ ಜಮಾ ಇವೆ. ಅವೆಲ್ಲವನ್ನೂ ಪೊಲೀಸರ ವಶಕ್ಕೆ ನೀಡಬೇಕೆಂದು ಹೇಳಿಲ್ಲ. ರೌಡಿಶೀಟರ್, ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾದವರು, ಯಾರ ಮೇಲೆ ಕ್ರಿಮಿನಲ್ ದಾಖಲೆಗಳಿರುತ್ತವೆಯೋ ಅವರು ಮಾತ್ರ ತಮ್ಮ ವೆಪನ್ಗಳನ್ನು ಪೊಲೀಸರಿಗೆ ಒಪ್ಪಿಸುವಂತೆ ಆದೇಶಿಸಲಾಗಿದೆ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಮನೆಯಲ್ಲಿ 4 ಶವ ಪತ್ತೆ, ಮೂವರಿಗೆ ಗಾಯ