ಕೊಡಗು: ಕೊರೊನಾ ಮಹಾಮಾರಿಯಿಂದ ತೀರಾ ತಡವಾಗಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೊಡಗು ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.
ಕೊಡಗಿನಲ್ಲಿ ಈ ಬಾರಿ 7,149 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅದಕ್ಕಾಗಿ 27 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಹೀಗೆ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಬರುತ್ತಿರುವುದರಿಂದ ನೂಕು ನುಗ್ಗಲು ಆಗದಂತೆ ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಧ್ವನಿವರ್ಧಕ ಬಳಸಲಾಗುತ್ತಿದ್ದು, ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಿಂದ 200 ಮೀಟರ್ ದೂರದಲ್ಲೇ ಬಿಡುವುದಕ್ಕೆ ತಿಳಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸನ್ನದ್ಧವಾದ ಕೊಡಗು ಶಿಕ್ಷಣ ಇಲಾಖೆ ಅದಕ್ಕಿಂತ ಮುಖ್ಯವಾಗಿ ಪ್ರತೀ ವಿದ್ಯಾರ್ಥಿಗೆ ಈಗಾಗಲೇ ತಲಾ ಎರಡು ಮಾಸ್ಕ್ ವಿತರಣೆ ಮಾಡಲಾಗಿದ್ದು, ಪೆನ್ನು, ಇತರೆ ಅಗತ್ಯ ವಸ್ತುಗಳನ್ನು ಪ್ರತೀ ವಿದ್ಯಾರ್ಥಿಯೂ ತರುವಂತೆ ಸೂಚಿಸಲಾಗಿದೆ.
ಪ್ರತೀ ಪರೀಕ್ಷಾ ಕೇಂದ್ರದಲ್ಲಿ ತಲಾ ನಾಲ್ಕು ಥರ್ಮಲ್ ಸ್ಕ್ರೀನಿಂಗ್ ಮಷಿನ್ ಇಡಲಾಗಿದೆ. ಅಲ್ಲದೆ ಸ್ಯಾನಿಟೈಸರ್ ಕೂಡ ಮಾಡಲಾಗುತ್ತಿದ್ದು, ಅಲ್ಲಿಯೂ ವಿದ್ಯಾರ್ಥಿಗಳು ಗುಂಪು ಗೂಡದಂತೆ ನೋಡಿಕೊಳ್ಳಲು ಈಗಾಗಲೇ ಪ್ರತೀ ಮೂರು ಅಡಿ ಅಂತರಕ್ಕೆ ಒಂದರದಂತೆ ಬಾಕ್ಸ್ ಕೂಡ ಹಾಕಲಾಗುತ್ತಿದೆ. ಅಲ್ಲದೆ ಪರೀಕ್ಷಾ ಕೊಠಡಿಯನ್ನು ಹುಡುಕಲು ಪರದಾಡದಂತೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಹಾಲ್ ಟಿಕೆಟ್ನಲ್ಲಿಯೇ ಪರೀಕ್ಷಾ ಕೊಠಡಿ ಸಂಖ್ಯೆಯನ್ನು ನಮೂದಿಸಿ ವಿತರಣೆ ಮಾಡಲಾಗಿದೆ.
ಜೊತೆಗೆ ಪ್ರತೀ ಕೊಠಡಿಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಶೌಚಾಲಯ ಸೇರಿದಂತೆ ಎಲ್ಲೆಡೆ ಬ್ಲೀಚಿಂಗ್ ಸೇರಿದಂತೆ ಎಲ್ಲಾ ರೀತಿಯಿಂದಲೂ ಸ್ಚಚ್ಚತೆ ಕೆಲಸವನ್ನು ಮಾಡಲಾಗಿದೆ ಎಂದು ಡಿಡಿಪಿಐ ಪೆರಿಗ್ರಿನ್ ಮಚ್ಚಾಡೋ ಮಾಹಿತಿ ನೀಡಿದ್ದಾರೆ.