ಮಡಿಕೇರಿ(ಕೊಡಗು):ಜಿಲ್ಲೆಯಲ್ಲಿ ಬಿರುಸುಗೊಂಡ ಮುಂಗಾರು ಮಳೆಯ ಜೊತೆಗೆ ಇಂದು ಕೂಡ ಭೂಮಿ ನಡುಗಿದೆ. ಈ ಮೂಲಕ 7ನೇ ಬಾರಿ ಭೂ ಕಂಪಿಸಿದಂತೆ ಆಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಜೊತೆಗೆ ಕಾವೇರಿ ನೀರಿಮಟ್ಟ ಹೆಚ್ಚಳವಾಗಿದ್ದು ನದಿ ಹಳ್ಳಗಳು ತುಂಬಿ ಹರಿಯುತ್ತಿವೆ.
ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಹಾಗೂ ಕರಿಕೆಯಲ್ಲಿ ಭೂಮಿ ಮತ್ತೆ ನಡುಗಿದೆ. ಇಂದು ಮಧ್ಯಾಹ್ನ 1.20ರ ಸುಮಾರಿಗೆ ಭಾರಿ ಶಬ್ದದೊಂದಿಗೆ 3/4 ಸೆಕೆಂಡ್ ಭೂಮಿ ಕಂಪಿಸಿದೆ. ಕರಿಕೆ, ಪೆರಾಜೆ ಮಂಗಳೂರು ಗಡಿ ಭಾಗ ಬೆಟ್ಟ ಗುಡ್ಡಗಳಿಂದ ಕೂಡಿದೆ.
ಇಲ್ಲಿ ಮಣ್ಣು ಕುಸಿತವಾದರೆ ಭಾರಿ ಅನಾಹುತ ಎದುರಾಗುವ ಸಂಭವ ಇದೆ. ಆದ್ದರಿಂದ ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಭೂಮಿ ಕಂಪನಕ್ಕೆ ನಿಖರವಾದ ಮಾಹಿತಿ ಅರಿತು, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸೇರಿಸುವ ಕೆಲಸ ಮಾಡಬೇಕೆಂಬ ಒತ್ತಾಯ ಹೆಚ್ಚಾಗಿದೆ.
ಇದೇ ವೇಳೆ ಮಳೆ ಕೂಡ ಹೆಚ್ಚಾದ ಪರಿಣಾಮ ಹಾರಂಗಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಅಧಿಕವಾಗಿದೆ. ಮುಂಜಾಗ್ರತೆ ಕ್ರಮವಾಗಿ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಇದರಿಂದಲೂ ನದಿ ಪಾತ್ರದ ಜನರು ಭಯಪಡುವಂತಾಗಿದೆ.
ನಿವಾಸಿಗಳು ಅತಂತ್ರ:ಕುಶಾಲನಗರದಲ್ಲೂ ಮಳೆ ಆಗುತ್ತಿದೆ. ಇಲ್ಲಿನ ಸಾಯಿ ಲೇಔಟ್ ನಿವಾಸಿಗಳು ಅತಂತ್ರರಾಗಿದ್ದಾರೆ. ಬಹುತೇಕ ಮಂದಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಿದ್ದ ಮನೆಗಳು ಮಳೆಗಾಲ ಬಂದರೆ ನೀರಿನಲ್ಲಿ ಮುಳುಗುತ್ತಿವೆ. ಮನೆ ಬಿಟ್ಟು ಎಲ್ಲಿಗೆ ಹೋಗುವುದು?, ಹೇಗೆ ಜೀವನ ಮಾಡುವುದು ಎಂಬುದನ್ನು ತಿಳಿಯುವುದೇ ಕಷ್ಟವಾಗಿದೆ. ಮಳೆಗಾಲದಲ್ಲಿ ನಮ್ಮ ಗೋಳು ಕೇಳುವವರೇ ಇಲ್ಲ ಎಂದೂ ಇಲ್ಲಿನ ನಿವಾಸಿಗಳು ಗೋಳಾಡುತ್ತಿದ್ದಾರೆ.
ಧರೆಗೆ ಬಿದ್ದ ಮರಗಳು: ಕಳೆದ ಮೂರು ದಿನಗಳಿಂದ ಮಳೆ ಹೆಚ್ಚಾಗಿದ್ದರಿಂದ ಜಿಲ್ಲೆಯ ಅಲ್ಲಲ್ಲಿ ರಸ್ತೆಗಳ ಮೇಲೆ ಮರ ಬೀಳುತ್ತಿವೆ. ಆಲ್ಲದೇ, ಸಣ್ಣ-ಪುಟ್ಟ ಬರೆಗಳು ಕೂಡ ಕುಸಿಯುತ್ತಿದ್ದು, ಜನರಿಗೆ ಭಯ ಶುರುವಾಗಿದೆ. ಮಂಗಳೂರು ರಸ್ತೆಯಲ್ಲಿ ಮಣ್ಣು ಕುಸಿದು ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.
ಇದನ್ನೂ ಓದಿ:ಆಹಾರ ಅರಸಿ ನಾಡಿಗೆ ಬಂದ ಕಾಡಾನೆ: ವಿದ್ಯುತ್ ತಂತಿ ತಗುಲಿ ಸಾವು