ಕರ್ನಾಟಕ

karnataka

ETV Bharat / state

ಕೊಡಗು ಕಾಂಗ್ರೆಸ್​​ನಲ್ಲಿ ಭಿನ್ನಮತ : ಮಾಜಿ ಸಚಿವ ಜೀವಿಜಯ ರಾಜೀನಾಮೆ

ಮಡಿಕೇರಿ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ.ಎ ಜೀವಿಜಯ ಕಾಂಗ್ರೆಸ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ.

congress-leader-b-a-jeevijaya-resigned-to-congress
ಕೊಡಗು ಕಾಂಗ್ರೆಸ್​​ನಲ್ಲಿ ಭಿನ್ನಮತ : ಕಾಂಗ್ರೆಸ್​​ಗೆ ರಾಜೀನಾಮೆ ಸಲ್ಲಿಸಿದ ಮಾಜಿ ಸಚಿವ ಜೀವಿಜಯ

By

Published : May 2, 2023, 9:00 PM IST

ಮಾಜಿ ಸಚಿವ ಜೀವಿಜಯ ಕಾಂಗ್ರೆಸ್​​ಗೆ ರಾಜೀನಾಮೆ

ಕೊಡಗು : ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್​​ ಪಕ್ಷದಿಂದ ಟಿಕೆಟ್ ಸಿಕ್ಕಿಲ್ಲ ಮತ್ತು ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಿದ್ದಾರೆ ಎಂದು ಅಸಮಾಧಾನಗೊಂಡ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ.ಎ ಜೀವಿಜಯ ಮಂಗಳವಾರ ಕಾಂಗ್ರೆಸ್​​ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ತಮ್ಮ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷರಿಗೂ ನೀಡಿರುವುದಾಗಿ ಹೇಳಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಇಂದು ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್‌ ಅವರನ್ನು ಬೆಂಬಲಿಸುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಸದ್ಯ ಯಾವ ಪಕ್ಷಕ್ಕೂ ಸೇರ್ಪಡೆಯಾಗುವುದಿಲ್ಲ. ಚುನಾವಣೆ ಬಳಿಕ ಈ ಬಗ್ಗೆ ನಿರ್ಧಾರ ಮಾಡುತ್ತೇನೆ. ಸದ್ಯ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ. ಪಕ್ಷ ಯಾವುದಿದ್ದರೂ ಕೊಡಗು ಜಿಲ್ಲೆಯ ಮೂಲದವರಿಗೆ ನನ್ನ ಬೆಂಬಲ ಎಂದು ಘೋಷಿಸಿದರು.

ಮಡಿಕೇರಿ ಕ್ಷೇತ್ರದಲ್ಲಿ ತನ್ನದೇ ಪ್ರಭಾವ ಹೊಂದಿರುವ ಕಾಂಗ್ರೆಸ್​ ನಾಯಕ ಜೀವಿಜಯ ಸೋಮವಾರಪೇಟೆ ತಾಲೂಕಿನಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಮುಖ್ಯಮತ್ರಿ ಆಗಿದ್ದ ಗುಂಡೂರಾವ್ ಅವರನ್ನು ಸೋಲಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್​ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೆ ಬೇರೆ ಜಿಲ್ಲೆಯವರನ್ನು ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಕೊಡಗಿನಲ್ಲಿ ಸ್ಥಳೀಯರು ಇದ್ದರೂ ಅವರಿಗೆ ಟಿಕೆಟ್ ನೀಡಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷರಿಗೆ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಪತ್ರ ಬರೆದಿದ್ದೆ. ಆದರೆ ನನ್ನ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಇದು ನನಗೆ ನೋವು ತರಿಸಿದೆ. ಮಡಿಕೇರಿ ಕ್ಷೇತ್ರದಲ್ಲಿ ಮಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅರಕಲಗೂಡು ಕ್ಷೇತ್ರದಲ್ಲಿ ತಂದೆ ಜೆಡಿಎಸ್ ಆಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ :ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲ್​

ABOUT THE AUTHOR

...view details