ಕೊಡಗು :ಆಗಸ್ಟ್ 5ರಂದು ಸುರಿದ ಭೀಕರ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರವಾಹ ಮತ್ತು ಭೂ ಕುಸಿತದ ಸ್ಥಳಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ ವಿ ಪ್ರತಾಪ್ ಮತ್ತು ಕೇಂದ್ರ ಹಣಕಾಸು ಸಚಿವಾಲಯ ಅಧಿಕಾರಿ ಡಾ.ಭಾರ್ತೇಂದು ನೇತೃತ್ವದ ತಂಡ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಟ್ಲಪ್ಪ ಪೈಸಾರಿ, ತಲಕಾವೇರಿ, ಚೆಟ್ಟಿಮಾನಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿತು.
ಈ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಭೂ ಕುಸಿತವಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದ ಕಾಫಿ, ಮೆಣಸಿನ ತೋಟಗಳು ಮತ್ತು ಭತ್ತದ ಗದ್ದೆಗಳು ನಾಶವಾಗಿವೆ. ಈ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಂಡವು ನೇರ ರೈತರಿಂದಲೇ ಮಾಹಿತಿ ಸಂಗ್ರಹಿಸಿತು.
ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದಿರುವ ಸ್ಥಳದಲ್ಲಿಯೂ ಪರಿಶೀಲಿಸಿತು. ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬವು ಜೀವಂತ ಸಮಾಧಿಯಾದ ಸ್ಥಳ ಪರಿಶೀಲನೆ ನಡೆಸಿದ ತಂಡ ನಾರಾಯಣ ಆಚಾರ್ಯ ಅವರ ಹೆಣ್ಣುಮಕ್ಕಳಾದ ನಿಮಿತಾ ಮತ್ತು ಶಾರದಾ ಜತೆಗೂ ಮಾತನಾಡಿದರು. ಅವರಿಂದಲೂ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ತಂಡದ ಸದಸ್ಯರು, ಕೆಎಸ್‍ಡಿಎಂಎ ಆಯುಕ್ತ ಮನೋಜ್ ರಂಜನ್, ತಲಕಾವೇರಿಯಲ್ಲಿ 24 ಗಂಟೆಯಲ್ಲಿ 488 ಮಿಲಿ ಮೀಟರ್ ಮಳೆ ಸುರಿದ ಪರಿಣಾಮ ಪ್ರವಾಹ ಮತ್ತು ಭೂಕುಸಿತವಾಗಿದೆ. ಸದ್ಯ ಸಾಕಷ್ಟು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನಾಳೆ ಕಂದಾಯ ಸಚಿವರೊಂದಿಗೂ ಸಭೆ ನಡೆಸಿ, ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.