ಕಲಬುರಗಿ:ಅವರಿಬ್ಬರೂ ಪರಸ್ಪರ ಪ್ರೀತಿಸಿ ಕಳೆದ 8 ವರ್ಷಗಳ ಹಿಂದೆ ಮನೆಯವರ ವಿರೋಧದ ಮಧ್ಯೆಯೂ ರಿಜಿಸ್ಟರ್ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂದುಕೊಂಡಂತೆ ಪ್ರೀತಿಯ ಮದುವೆ ಜೀವನ ಚೆನ್ನಾಗಿಯೇ ಇತ್ತು. ದಿನ ಕಳೆದಂತೆ ಗಂಡನ ಮನೆಯವರು ಅನ್ಯ ಜಾತಿಯವಳು ಅಂತ ಕಿರುಕುಳ ಕೊಡಲು ಆರಂಭಿಸಿದ್ದಾರೆ. ಆದ್ರೆ ಮಹಿಳೆ ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ಪೋಷಕರು ಕೊಲೆ ಮಾಡಿದ್ದಾರೆಂದು ಆರೋಪ ಮಾಡ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಸುಜಾತಾ ಮೃತ ಗೃಹಿಣಿ. ಕಳೆದ ಹಲವು ವರ್ಷಗಳಿಂದ ಕಲಬುರಗಿಯಲ್ಲಿ ವಾಸವಾಗಿದ್ದ ಸುಜಾತಾ, ನರ್ಸಿಂಗ್ ಮುಗಿಸಿ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಕಲಬುರಗಿಯ ತಾರಫೈಲ್ ನಿವಾಸಿ ಬೀಸರಾವ್ ಪರಿಚಯ ಆಗಿತ್ತು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಮುಂದೆ ಪ್ರೀತಿಗೆ ತಿರುಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ರು. ಆದ್ರೆ ಮನೆಯವರು ಇಬ್ಬರ ಮದುವೆಗೆ ಒಪ್ಪದ ಹಿನ್ನೆಲೆ ಜೇವರ್ಗಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಮಾಡಿಕೊಂಡು ದಾಂಪತ್ಯ ಆರಂಭಿಸಿದ್ದರು.
ಗಂಡನ ಮನೆಯವರಿಂದ ಕಿರುಕುಳ ಆರೋಪ: ಮದುವೆ ಆದ ಕೆಲ ದಿನಗಳ ಬಳಿಕ ಎಲ್ಲವೂ ಸರಿಯಾಗಿಯೇ ಇತ್ತು. ಅಲ್ಲದೆ ಈ ದಂಪತಿಗೆ ಮುದ್ದಾದ ಮೂರು ಮಕ್ಕಳು ಕೂಡ ಇವೆ. ಆದ್ರೆ ದಿನ ಕಳೆದಂತೆ ಗಂಡನ ಮನೆಯವರು ಕಿರುಕುಳ ನೀಡಲು ಆರಂಭ ಮಾಡಿದ್ರು. ನೀನು ಅನ್ಯ ಜಾತಿಯವಳು, ನಮ್ಮ ಜಾತಿಯ ಹುಡುಗಿಯನ್ನು ಮದುವೆ ಮಾಡಿದ್ರೆ ವರದಕ್ಷಿಣೆ ಬರುತ್ತಿತ್ತು. ಆದ್ರೆ ನೀನು ಏನು ತಂದಿಲ್ಲ ಅಂತ ಗಂಡನ ಮನೆಯವರು ನಿತ್ಯ ಕಿರುಕುಳ ನೀಡ್ತಿದ್ರಂತೆ. ಕಿರುಕುಳ ಹಿನ್ನೆಲೆ ಮಹಿಳೆಯು ಹಲವು ಸಲ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರಂತೆ. ಆದ್ರೆ ಹಿರಿಯರೆಲ್ಲ ಸೇರಿ ಇಬ್ಬರನ್ನು ಒಂದುಗೂಡಿಸಿ ರಾಜಿ ಪಂಚಾಯ್ತಿ ಮಾಡಿದ್ರು. ಇಷ್ಟಾದರೂ ಇವರ ಸಂಸಾರದಲ್ಲಿನ ಕಲಹ ಮಾತ್ರ ಸರಿಯಾಗಿರಲಿಲ್ಲವಂತೆ.