ಕಲಬುರಗಿ : ಉತ್ತರಪ್ರದೇಶದಲ್ಲಿ ನಡೆದ ಯುವತಿ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ ಮುಂದುವರೆದಿವೆ. ಪ್ರಗತಿಪರ ಸಂಘಟನೆಗಳ ಒಕ್ಕೂಟ, ಯೂತ್ ಕಾಂಗ್ರೆಸ್, ಎಸ್ಯುಸಿಐ, ವುಮ್ಯಾನ್ ಇಂಡಿಯಾ ಮೂಮೆಂಟ್ ಸೇರಿದಂತೆ ಹಲವು ಸಂಘಟನೆಗಳಿಂದ ಇಂದು ನಗರದಲ್ಲಿ ಸರಣಿ ಪ್ರತಿಭಟನೆ ನಡೆಸಲಾಯಿತು. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಯ ಕಾರ್ಯಕರ್ತರು ಯುಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ, ಅತ್ಯಾಚಾರ ಪ್ರಕರಣಗಳನ್ನು ಗಮನಿಸುತ್ತಾ ಹೋದ್ರೆ ನಾವು ಭಾರತದಲ್ಲಿದೇವೋ ಅಥವಾ ನರಕದಲ್ಲಿ ವಾಸಿಸುತ್ತಿದೇವೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಉತ್ತರಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಈ ದೇಶವೇ ತಲೆತಗ್ಗಿಸುವಂತಹ ವಿಚಾರ. ಇದೊಂದು ಎರಡನೇ ನಿರ್ಭಯ ಪ್ರಕರಣ, 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಬೆನ್ನು ಮೂಳೆ ಮುರಿದು ನಾಲಿಗೆ ಕತ್ತರಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.