ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಘೋಷಣೆ ವಿವಾದ ಕಲಬುರಗಿ:ಚುನಾವಣೆ ಘೋಷಣೆಗೂ ಮುನ್ನವೇ ಕೇಸರಿ ಬಣದಲ್ಲಿ ಟಿಕೆಟ್ ಗೊಂದಲ ಸೃಷ್ಟಿಯಾಗಿದೆ. ಕಲಬುರಗಿ ಉತ್ತರ ಮತಕ್ಷೇತ್ರದ ಟಿಕೆಟ್ ಈ ಬಾರಿ ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್‌ಗೆ ಎಂದು ಹೇಳಿಕೆ ನೀಡಿರುವ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ವಿರುದ್ಧ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಮುರುಗೇಶ ನಿರಾಣಿ ಹೇಳಿರುವ ಒಂದು ಮಾತು ಇದೀಗ ವಿವಾದ ಸೃಷ್ಟಿಸಿದೆ.
ಎರಡು ದಿನಗಳಿಂದ ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ನಿರಾಣಿ ಬುಧವಾರ ಸಂಜೆ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಚಂದು ಪಾಟೀಲ್ ಅವರು ನೂತನ ಬಿಜೆಪಿ ಕಚೇರಿ ಉದ್ಘಾಟನೆಗೆ ತೆರಳಿದ್ದರು. ಉದ್ಘಾಟನೆ ಬಳಿಕ ಮಾತನಾಡಿದ ನಿರಾಣಿ, "ವಿಧಾನಸಭೆ ಚುನಾವಣೆಯ ಉತ್ತರ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಪಕ್ಕಾ" ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ತುತ್ತಾಗಿದೆ.
ನಿರಾಣಿ ಅವರ ಮಾತಿನಿಂದ ಅಸಮಧಾನಗೊಂಡ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ ಗುಡುಗಿದ್ದಾರೆ. "ಉಸ್ತುವಾರಿ ಸಚಿವರಾದವರಿಗೆ ಟಿಕೆಟ್ ಘೋಷಣೆ ಹಕ್ಕಿರಲ್ಲ. ಸಾಕಷ್ಟು ಅಭಿವೃದ್ದಿ ಕಾರ್ಯಗಳಿವೆ. ಅವುಗಳ ಬಗ್ಗೆ ಗಮನಹರಿಸಲಿ. ಟಿಕೆಟ್ ಘೋಷಣೆ ಮಾಡುವ ಹಕ್ಕು ಇವರಿಗೆ ಕೊಟ್ಟವವರಾರು?, ನಿರಾಣಿಯವರಿಗೆ ಸ್ವತಃ ತಮ್ಮ ಟಿಕೆಟ್ ಸಿಗುವ ಬಗ್ಗೆಯೇ ಖಾತ್ರಿಯಿಲ್ಲ" ಎಂದು ಟಾಂಗ್ ನೀಡಿದ್ದಾರೆ.
"ಅಭ್ಯರ್ಥಿಗೆ ಟಿಕೆಟ್ ಘೋಷಿಸುವ ಮುಂಚೆ ಕೋರ್ ಕಮಿಟಿಯಲ್ಲಿ ವರಿಷ್ಟರು ಸೇರಿ ನಿರ್ಧರಿಸಿ ಕೇಂದ್ರ ಸಮಿತಿಗೆ ಕಳಿಸಿದ ಮೇಲೆ ಅಲ್ಲಿ ಟಿಕೆಟ್ ಫೈನಲ್ ಮಾಡಲಾಗುತ್ತದೆ. ನಿರಾಣಿಯರವರು ಯಾವ ಉದ್ದೇಶದಿಂದ ಘೋಷಣೆ ಮಾಡಿದ್ದಾರೆ ಗೊತ್ತಿಲ್ಲ. ಇದನ್ನು ಖಂಡಿಸುತ್ತೇನೆ" ಎಂದು ಗುತ್ತೆದಾರ ಹೇಳಿದರು. ಬಿಜೆಪಿ ಕಾರ್ಯಕರ್ತ ಅವಲಂಬಿತ ಪಕ್ಷ. ಐದು ಬಾರಿ ಸಮೀಕ್ಷೆ ಮಾಡಿ ಟಿಕೆಟ್ ನೀಡುತ್ತದೆ. ಕುಂತಲ್ಲಿ ನಿಂತಲ್ಲಿ, ಕಾರ್ ಬಾಗಿಲು ತೆಗೆಯೋರಿಗೆ, ಇಲ್ಲವೇ ತಮಗೆ ಬೇಕಾದವರಿಗೆ ಟಿಕೆಟ್ ಕೊಡೋ ಪದ್ದತಿ ಕಾಂಗ್ರೆಸ್ ಜೆಡಿಎಸ್‌ನಲ್ಲಿದೆ. ಬಿಜೆಪಿಯಲ್ಲಿ ಇಂತವರಿಗೆ ಟಿಕೇಟ್ ಕೊಡುತ್ತೇನೆ ಅನ್ನುವ ಅಧಿಕಾರ ರಾಜ್ಯ ಉಪಾಧ್ಯಕ್ಷನಾದ ನನಗೂ ಇಲ್ಲ, ಬೇರೆಯವರಿಗೂ ಇಲ್ಲ. ನಿರಾಣಿಯವರು ತಮಗಿರುವ ಇತಿಮಿತಿಯಲ್ಲಿ ಮಾತಾಡಬೇಕೆೆಂದರು.
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ನಿರಾಣಿ, "ಚಂದು ಪಾಟೀಲ್ ಕಳೆದ ಬಾರಿ ಸ್ಪರ್ಧೆ ಮಾಡಿ ಅತಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಕೊನೆಗಳಿಗೆಯಲ್ಲಿ ಕೇವಲ 15 ದಿನ ಇರುವಾಗ ಟಿಕೆಟ್ ನೀಡಿದ್ದಕ್ಕೆ ಪ್ರಚಾರಕ್ಕೆ ಸಮಯ ಇಲ್ಲದೇ ಸೋಲಾಗಿದೆ. ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಕಾಂಪಿಟೇಷನ್ ಕೂಡಾ ಇಲ್ಲ, ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಾಗ ಹಿರಿಯ ನಾಯಕರು ಮುಂದಿನ ಬಾರಿ ಟಿಕೆಟ್ ನೀಡುವ ಸುಳಿವು ನೀಡಿ ಕ್ಷೇತ್ರದಲ್ಲಿ ಕೆಲಸ ಮುಂದುವರೆಸಲು ಹೇಳಿದಂತೆ ನಾಲ್ಕೂವರೆ ವರ್ಷದಿಂದ ಚಂದು ಪಾಟೀಲ್ ಕ್ಷೇತ್ರದಲ್ಲಿ ಕೆಲಸ ಮಾಡಿ ಜನಮನ್ನಣೆ ಪಡೆದಿದ್ದಾರೆ."
"ಹೀಗಾಗಿ ನಾನು ಸಹಜವಾಗಿ ಹೇಳಿಕೆ ಕೊಟ್ಟಿದ್ದೇನೆ. ಇದು ನನ್ನ ವೈಯಕ್ತಿಕ ಹೇಳಿಕೆ ಮಾತ್ರ. ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ಹೇಳಿದ್ದಕ್ಕೆ ಪ್ರತಿಯೊಬ್ಬರೂ ಬದ್ಧರಿರಬೇಕಾಗುತ್ತದೆ. ಮಾಲಿಕಯ್ಯ ಗುತ್ತೆದಾರ ಹಿರಿಯರು ಅವರಿಗೆ ಗೊತ್ತಿರುತ್ತದೆ" ಎಂದು ಹೇಳಿದರು.
ಇದನ್ನೂ ಓದಿ:ಜೆಡಿಎಸ್‌ಗೆ ಓಟ್ ಹಾಕಿದರೆ ಬಿಜೆಪಿಗೆ ಓಟ್ ಹಾಕಿದಂತೆ: ಸಿದ್ದರಾಮಯ್ಯ