ಕಲಬುರಗಿ :ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ಆಡಳಿತದ ಸರ್ಕಾರ ಆ ಕಾನೂನು ತೆಗೆದುಹಾಕುತ್ತಿದೆ. ಹೀಗಾಗಿ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಡಗಂಚಿಯ ಶಾಂತಲಿಂಗೇಶ್ವರ ಸಂಸ್ಥಾನ ಮಠದ ವೀರಭದ್ರ ಶಿವಾಚಾರ್ಯರು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಮಾತೆ ದೇವರು. ದೇವರ ಹತ್ಯೆ ಮಾಡಿದವರು ಏನು ಆಗುತ್ತಾರೆ ಎಂದು ನಾವೆಲ್ಲರೂ ಇಂದು ಲೆಕ್ಕ ಹಾಕಬೇಕು. ಯಾರು ಅದನ್ನು ಸಂರಕ್ಷಣೆ ಮಾಡುತ್ತಾರೆ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತೆ. ಸರ್ಕಾರ ಸಹ ಇರುತ್ತೆ. ಅವರು ಮಂತ್ರಿಗಳು ಸಹ ಆಗುತ್ತಾರೆ. ಈ ವಿಷಯಗಳು ಗಮನದಲ್ಲಿ ಇಟ್ಟುಕೊಂಡು ಈಗಿನ ಸರ್ಕಾರ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಧಾನಸೌಧವನ್ನು ಮುತ್ತಿಗೆ ಹಾಕುತ್ತೇವೆ: ನಂತರ ಸಿದ್ಧಲಿಂಗೇಶ್ವರ ಸಂಸ್ಥಾನದ ಕೇದಾರ ಶೀಗಳು ಮಾತನಾಡಿ, ನಾವು ಯಾವ ಸರ್ಕಾರದ ವಿರುದ್ದ ಅಥವಾ ಪರವಾಗಿ ಇಲ್ಲ. ಆದರೆ ಗೋ ಹತ್ಯೆ ಮತ್ತು ಮತಾಂತರ ಕಾಯ್ದೆಯ ಕುರಿತು ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಈ ಸರ್ಕಾರ ಕೂಡಲೇ ಕೈಬಿಡಬೇಕು ಎಂದರು. ಐದು ಜನ ಮಾತ್ರ ಶ್ರೀಗಳು ಬಂದಿದ್ದು, ಮುಂಬರುವ ದಿನಗಳಲ್ಲಿ ಐದು ಸಾವಿರ ಶ್ರೀಗಳು ಸೇರಿ ನಾವು ವಿಧಾನಸೌಧವನ್ನು ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಿಸರ್ಗದಲ್ಲಿರುವ ಪ್ರಾಣಿ ಪಕ್ಷಿಗಳು, ಗಿಡಗಳೊಂದಿಗೆ ನಾವು ಇರಬೇಕು. ಅದನ್ನು ಕಡಿದು ಅದಕ್ಕೆ ರಾಜಕೀಯ ಬಣ್ಣವನ್ನು ನೀಡಿ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಗೋ ಮಾತೆಯನ್ನು ನಾವು ಪೂಜಿಸುತ್ತೇವೆ. ಸರ್ಕಾರಕ್ಕೆ ಅಷ್ಟೇ ಅಲ್ಲ, ನಾವು ಸಮಾಜದಲ್ಲಿ ಸಹ ಕಳಕಳಿ ಮೂಡಿಸಬೇಕಾಗಿದೆ ಎಂದು ಹೇಳಿದರು.