ಸೇಡಂ: ಕೊರೊನಾ ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಸಾವಿರ ಕೋಟಿ ಪ್ಯಾಕೇಜ್ ಅನ್ನು ಶಾಸಕ ರಾಜಕುಮಾರ ಪಾಟೀಲ್ ಶ್ಲಾಘಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಸಾವಿರ ಕೋಟಿಯ ಪ್ಯಾಕೇಜ್ನಿಂದ ಬರುವ ದಿನಗಳಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿವೆ, ಸ್ವಾವಲಂಬಿ ಬದುಕಿಗೆ ದಾರಿಯಾಗಲಿದೆ, ಸಣ್ಣ ಕೈಗಾರಿಕೆಗಳು ತಲೆಎತ್ತಲಿವೆ ಎಂದರು.
ನಂತರ ಮಾತು ಮುಂದುವರೆಸಿ, ಸ್ಥಳೀಯ ಉತ್ಪಾದನೆಗೆ ವೇದಿಕೆ ದೊರೆಯಲಿದ್ದು, ದುಡಿದು ತಿನ್ನುವ ಕೈಗಳಿಗೆ ಶಕ್ತಿ ತುಂಬಲಿದೆ. ರೈತರು, ಕೂಲಿ ಕಾರ್ಮಿಕರು, ಕುಶಲಕರ್ಮಿಗಳು, ಚಿಕ್ಕ ಉದ್ಯಮಗಳು ಹಾಗೂ ಬಡವರಿಗೆ ಅನುಕೂಲವಾಗಲಿದೆ ಎಂದರು.
ಸ್ವಾವಲಂಬಿ ರಾಷ್ಟ್ರ ನಿರ್ಮಿಸುವ ಗುರಿಯೊಂದಿಗೆ ಮುನ್ನಡೆದ ಮೋದಿ, ವಿರೋಧ ಪಕ್ಷದವರ ಕಲ್ಪನೆಗೂ ಮೀರಿದ ಪ್ಯಾಕೇಜ್ ನೀಡಿದ್ದಾರೆ. ಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಸಲಹೆ ನೀಡಬೇಕಾದ ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಕೊರೊನಾ ಜೊತೆಗೆ ಬದುಕುವುದು ಕಲಿಯಬೇಕು. ಈ ವೈರಸ್ ವಿರುದ್ಧದ ಯುದ್ಧದಲ್ಲಿ ಜಯಿಸಲು ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಎಂದರು.