ಕಲಬುರಗಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕಂದ್ರೆ ಖಾತೆ ಹಂಚಿಕೆ ಮುನ್ನವೇ ಪೊಲೀಸ್ ಇಲಾಖೆ ಮೇಲೆ ಹಿಡಿತ ಸಾಧಿಸಲು ಸಚಿವ ಪ್ರಿಯಾಂಕ್ ಖರ್ಗೆ ಮುಂದಾಗಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಠಾಣೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಖಡಕ್ ಸೂಚನೆ ನೀಡುವ ಮೂಲಕ ಗೃಹ ಖಾತೆ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ.
ಕಲಬುರಗಿ ಪೊಲೀಸ್ ಕಮಿಷನರ್ ಹಾಗೂ ಎಸ್ಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಖುದ್ದು ಕರೆ ಮಾಡುವ ಮೂಲಕ ಖಡಕ್ ಸೂಚನೆ ನೀಡಿದ್ದಾರೆ. ಪೊಲೀಸ್ ಠಾಣೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅಕ್ರಮ ಜೂಜು ಬೆಟ್ಟಿಂಗ್ ದಂಧೆಗೆ ಬ್ರೇಕ್ ಬೀಳಬೇಕು. ಅಕ್ರಮ ಮರಳು ದಂಧೆ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಡ್ರಗ್, ಗಾಂಜಾ, ಅಫೀಮ್ ನಂತಹ ಮಾದಕ ದಂಧೆ ನಿಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲ, ರೌಡಿಗಳು ಮತ್ತು ದ್ವೇಷಭಾಷಣ ಮಾಡುವವರನ್ನು ನಿಯಂತ್ರಿಸುವಂತೆ ಸೂಚನೆ ನೀಡುವ ಮೂಲಕ ಪರೋಕ್ಷವಾಗಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ, ರೌಡಿಶೀಟರ್ ಮಣಿಕಂಠ ರಾಠೋಡ್, ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ಟಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ಆದ್ರೆ ಸಹಿಸುವುದಿಲ್ಲ ಎಂದು ಪೊಲೀಸ್ ಕಮಿಷನರ್ ಆರ್ ಚೇತನ್, ಎಸ್ಪಿ ಇಶಾ ಪಂತ್ ಅವರಿಗೆ ಖುದ್ದು ಕರೆ ಮಾಡಿ ಖಡಕ್ ಸೂಚನೆ ನೀಡಿದ್ದಾರೆ. ಇಷ್ಟರಲ್ಲೇ ಬಂದು ಮೀಟಿಂಗ್ ಮಾಡಿ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸೋದಾಗಿಯೂ ಹೇಳುವ ಮೂಲಕ ಗೃಹ ಖಾತೆ ಆಕಾಂಕ್ಷಿ ಅನ್ನೋದನ್ನು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದ್ದಾರೆ.