ಕರ್ನಾಟಕ

karnataka

ಮಾಣಿಕೇಶ್ವರಿ ಲಿಂಗೈಕ್ಯ: ನಾಳೆ ಅಂತ್ಯಸಂಸ್ಕಾರ, ಮಾಣಿಕ್ಯಗಿರಿ ಪ್ರವಾಸಿ ತಾಣ ಮಾಡಲು ಒತ್ತಾಯ

ಸೇಡಂ ತಾಲೂಕಿನ ಸುಕ್ಷೇತ್ರ ಯಾನಗುಂದಿಯ ಮಹಾಯೋಗಿನಿ, ಮಾಣಿಕ್ಯಗಿರಿ ಬೆಟ್ಟದ ಗುಹೆಯಲ್ಲಿ ವಾಸವಿದ್ದ ಮಾತೆ ಮಾಣಿಕೇಶ್ವರಿ (86) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರ ರಾತ್ರಿ 8.30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದರು. ಇಂದು ಬೆಳಿಗ್ಗೆ 10 ರಿಂದ ಮೃತದೇಹದ ಅಂತಿಮ ದರ್ಶನಕ್ಕೆ ಮಠದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ 12 ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ. ಕಾಶಿಯಿಂದ ಮಾತೆಯನ್ನು ತಂದು ಪ್ರತಿಷ್ಟಾಪನೆ ಮಾಡಿದ್ದ ಈಶ್ವರ ಲಿಂಗದ ಬಳಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಮೂಲಗಳಿಂದ ಮಾಹಿತಿ ದೊರೆತಿದೆ.

By

Published : Mar 8, 2020, 1:45 PM IST

Published : Mar 8, 2020, 1:45 PM IST

Mata Maanikeswari is no more
ಮಾತಾ ಮಾಣಿಕೇಶ್ವರಿ

ಕಲಬುರಗಿ: ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು, ಅಹಿಂಸಾ ಯೋಗೇಶ್ವರಿ ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾಗಿದ್ದು, ಮಾಣಿಕ್ಯಗಿರಿಯನ್ನು ಪ್ರವಾಸಿ ತಾಣ ಮಾಡುವಂತೆ ಭಕ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜೊತೆಗೆ ಇಂದು ಮಹಾ ಯೋಗಿನಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಠದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ನಾಳೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಮಾತೆ ಮಾಣಿಕೇಶ್ವರಿ ನಡೆದು ಬಂದ ಹಾದಿ..

1934 ಜುಲೈ 26 ರಂದು ಸೇಡಂ ತಾಲೂಕಿನ ಕುಗ್ರಾಮ ಮಲ್ಲಾಬಾದ್‌ನ ಗಂಗಾಮತ ಕೊಲಿ ಸಮಾಜದ ಭಾಗಪ್ಪ ಮತ್ತು ಆಶಮ್ಮ ಅವರ 4ನೇ ಪುತ್ರಿಯಾಗಿ ಮಾಣಿಕೇಶ್ವರಿ ಜನ್ಮ ತಾಳಿದ್ದರು. ಕಡು ಬಡತನದ ಕುಟುಂಬದಲ್ಲಿ ಬೆಳೆದ ಇವರು 9ನೇ ವರ್ಷಕ್ಕೆ ಬಾಲ್ಯ ವಿವಾಹಕ್ಕೆ ಒಳಗಾಗಿದ್ದರು. ಮೂರು ವರ್ಷ ಸಂಸಾರ ನಡೆಸೋದರೊಳಗಾಗಿ ವೈರಾಗ್ಯ ಜೀವನದ ಹಾದಿ ತುಳಿದ ಮಾಣಿಕೇಶ್ವರಿ, 1949 ಅಂದ್ರೆ ತಮ್ಮ 15 ನೇ ವಯಸ್ಸಿಗೆ ಯಾನಾಗುಂದಿ ಸೇರಿಗುಡ್ಡದಲ್ಲಿ ಮರಗಿಡಗಳನ್ನು ಹತ್ತಿ ಶಿವ ಧ್ಯಾನ ಮಾಡುತ್ತಾ ಅನ್ನ-ನೀರು ಸೇವಿಸದೆ ಬೆಟ್ಟದಲ್ಲಿಯೇ ವಾಸವಿದ್ದರು.

ಬಳಿಕ 1953ರಲ್ಲಿ ಕಾಶಿ ಕ್ಷೇತ್ರದಿಂದ ಶಿವಲಿಂಗ ತಂದು ಪ್ರತಿಷ್ಠಾಪಿಸಿ ಮಾಣಿಕ್ಯಗಿರಿ ಎಂದು ಬೆಟ್ಟಕ್ಕೆ ನಾಮಕರಣ ಮಾಡಿದರು. ಶಿವಾಲಯದ ಹಿಂದಿನ ಕೋಣೆಯಲ್ಲಿಯೇ ಮಾಣಿಕೇಶ್ವರಿ ಘೋರ ತಪಸ್ಸು ಮಾಡುತ್ತಿದ್ದರು. ಶಿವರಾತ್ರಿ ಮತ್ತು ಗುರುಪೂರ್ಣಿಮೆಯಂದು ವರ್ಷಕ್ಕೆರಡು ಬಾರಿ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಿದ್ದರು.

ಇದನ್ನು ಓದಿ:ಯಾನಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯ

ಸುಮಾರು ವರ್ಷಗಳಿಂದ ಆಹಾರ ತ್ಯಜಿಸಿ ಧ್ಯಾನದಲ್ಲಿ ತೊಡಗುತ್ತಿದ್ದ ಮಾಣಿಕೇಶ್ವರಿ ದರ್ಶನ ಅಪರೂಪವಾಗಿ ಇರುತ್ತಿತ್ತು. ಮಾತೆ ಬಯಸಿದರೆ ಮಾತ್ರ ದರ್ಶನ, ಉಳಿದ ಸಮಯದಲ್ಲಿ ಪ್ರಭಾವಿ ಮುಖಂಡರೇ ಬಂದರೂ ದರ್ಶನ ನೀಡುತ್ತಿರಲಿಲ್ಲ.

ಕರ್ನಾಟಕ, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲಿ ಭಕ್ತರನ್ನು ಹೊಂದಿದ್ದು, ಮಾಣಿಕೇಶ್ವರಿ ಪಾರ್ಥಿವ ಶರೀರದ ದರ್ಶನ ಪಡೆಯಲು ಯಾನಾಗುಂದಿಗೆ ಭಕ್ತರ ದಂಡು ಹರಿದು ಬರುತ್ತಿದೆ.

ನಾಳೆ 12 ಗಂಟೆಗೆ ಅಂತ್ಯಕ್ರಿಯೆ:
ಇಂದು ಬೆಳಿಗ್ಗೆ 10 ರಿಂದ ಮೃತದೇಹದ ಅಂತಿಮ ದರ್ಶನಕ್ಕೆ ಮಠದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ 12 ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ. ಕಾಶಿಯಿಂದ ಮಾತೆಯನ್ನು ತಂದು ಪ್ರತಿಷ್ಟಾಪನೆ ಮಾಡಿದ್ದ ಈಶ್ವರ ಲಿಂಗದ ಬಳಿಯೇ ಅಂತ್ಯಕ್ರಿಯೆ ನಡೆಯಲಿದೆ.

ಮಾತಾಜೀ ಇದೇ ಸ್ಥಳದಲ್ಲಿ ಜೀವಂತ ಸಮಾಧಿಯಾಗಬೇಕೆಂಬ ಅಪೇಕ್ಷೆ ಹೊಂದಿದ್ದರು. ಆದ್ರೆ ಭಕ್ತರ ಒತ್ತಾಯಕ್ಕೆ ಮಣಿದು ಜೀವಂತ ಸಮಾಧಿಯಾಗೋದನ್ನು ಅವರು ಕೈಬಿಟ್ಟಿದ್ದರು. ಅವರ ಅಂತಿಮಿಚ್ಚೆಯಂತೆ ಶಿವಲಿಂಗದ ಬಳಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಮೂಲಗಳು ಮಾಹಿತಿ ನೀಡಿವೆ.

'ಮಾಣಿಕ್ಯಗಿರಿ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಿ'
ಮಾತೆ ತಪಸ್ಸು ಮಾಡಿದ ಮಾಣಿಕ್ಯಗಿರಿ ಬೆಟ್ಟ ಅನಾಥವನ್ನಾಗಿ ಮಾಡದೆ ಪ್ರವಾಸಿ ತಾಣವನ್ನಾಗಿ ಮಾಡಿ ಅಭಿವೃದ್ಧಿಪಡಿಸಬೇಕು. ಅಮ್ಮನವರ ಜೀವನ ಇತಿಹಾಸ ಸಾರುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

ABOUT THE AUTHOR

...view details