ಕಲಬುರಗಿ :ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 15 ಸರ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 298 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಕಲಬುರಗಿ ಮೂಲದ ಶೇಖ್ ಅಜರುದ್ದೀನ್ (26) ಹಾಗೂ ಮುಹಮ್ಮದ್ ತೌಸೀಫ್ (23) ಬಂಧಿತರು.
ಬಂಧಿತ ಇಬ್ಬರು ಆರೋಪಿಗಳು ಕಳೆದೊಂದು ವರ್ಷದಿಂದ ನಗರದ ವಿವಿಧೆಡೆ ಕಳ್ಳತನ ಮಾಡಿ ಪರಾರಿಯಾಗಿದ್ದರು. ಅಶೋಕ್ ನಗರ, ಸ್ಟೇಷನ್ ಬಜಾರ್, ಆರ್ ಜಿ ನಗರ, ಎಂ ಬಿ ನಗರ, ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಮತ್ತು ಬ್ರಹ್ಮಪುರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮೇಲೆ ಬಂದು ಮಹಿಳೆಯರ ಕೊರಳಿಗೆ ಕೈಹಾಕಿ ಚಿನ್ನದ ಸರ ಕದ್ದು ಪರಾರಿಯಾಗಿದ್ರು. ನಿರಾಯಾಸವಾಗಿ ಸರಗಳ್ಳತನ ಮಾಡುತ್ತಾ ಒಂದು ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಓಡಾಡುತ್ತಿದ್ದ ಇವರ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಿಕೊಂಡು ಫೀಲ್ಡ್ಗಿಳಿದ ಪೊಲೀಸರು ಇದೀಗ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.
ಆರೋಪಿಗಳ ಬಂಧನದಿಂದ ಒಟ್ಟು 15 ಸರಗಳ್ಳತನ ಪ್ರಕರಣಗಳನ್ನು ಭೇದಿಸಿದಂತಾಗಿದೆ. ಬಂಧಿತರಿಂದ 17 ಲಕ್ಷದ 88 ಸಾವಿರ ಮೌಲ್ಯದ 298 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಎರಡು ಬೈಕ್ಗಳನ್ನು ಜಪ್ತಿ ಮಾಡಿಕೊಂಡಿದ್ದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಓರ್ವ ಆರೋಪಿ ಟಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನೋರ್ವ ಫರ್ನಿಚರ್ ವರ್ಕ್ ಮಾಡುತ್ತಿದ್ದ. ಬೈಕ್ನಲ್ಲಿ ಫೀಲ್ಡ್ಗೆ ಇಳಿಯುತ್ತಿದ್ದ ಆರೋಪಿಗಳು ನಗರಾದ್ಯಂತ ಓಡಾಡಿ ಮಹಿಳೆಯರ ಚಿನ್ನದ ಸರಗಳನ್ನು ಎಗರಿಸಿ ಎಸ್ಕೇಪ್ ಆಗುತ್ತಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಖಾಕಿ ಪಡೆ ಬಂಧಿಸಿದೆ.