ಕಲಬುರಗಿ: ರಾತ್ರಿಯಾಗುತ್ತಿದ್ದಂತೆ ರಸ್ತೆಯಲ್ಲಿ ಹೋಗುವ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುವ ಕಾರ್ಯದಲ್ಲಿ ಪುಡಾರಿ ಗ್ಯಾಂಗ್ ಸಕ್ರಿಯವಾಗಿದೆ. ಹೀಗಾಗಿ ರಾತ್ರಿ ಮನೆಯಿಂದ ಹೊರಬರಲು ನಗರದ ಜನತೆ ಭಯಪಡುವಂತಹ ಪರಿಸ್ಥಿತಿಯಿದೆ.
ನಗರದ ರಾಮ ಮಂದಿರ ರಿಂಗ್ ರಸ್ತೆ, ನಾಗನಳ್ಳಿ ಕ್ರಾಸ್, ಹಳೆ ಜೇವರ್ಗಿ ರಸ್ತೆಯ ಅಂಡರ್ ಬ್ರಿಡ್ಜ್ ಬಳಿಯ ಶಾಸ್ತ್ರಿ ಚೌಕ್ ಸೇರಿದಂತೆ ಹಲವೆಡೆ ಜನರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚುವ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಸಾರ್ವಜನಿಕರು ಪ್ರಕರಣ ದಾಖಲಿಸಿಲ್ಲದ ಕಾರಣ ಇಂತಹ ಘಟನೆಗಳು ನಗರದಾದ್ಯಂತ ಮರುಕಳಿಸುತ್ತಿವೆ. ರಾತ್ರಿ 10 ಗಂಟೆ ನಂತರ ಮನೆಯಿಂದ ಹೊರಗೆ ಬರಲು ಭಯಪಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಪ್ರಕರಣ-1:
ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಎನ್ಡಬ್ಲ್ಯೂಕೆಆರ್ಟಿಸಿ ಕಲಬುರಗಿ ಘಟಕ-1ರ ಚಾರ್ಜ್ಮನ್ ರತ್ನಪ್ಪ ಜೈನ್ ಅವರನ್ನು ಶ್ರೀಗುರು ಕಾಲೇಜು ಹತ್ತಿರ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡಿ ಹಣ, ಹೆಲ್ಮೆಟ್ ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.