ಕಲಬುರಗಿ: ಕರ್ನಾಟಕ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಮಹಾರಾಷ್ಟ್ರದ ಗಾಂಜಾ ದಂಧೆಕೋರರ ವಿರುದ್ಧ ಕರ್ನಾಟಕ-ಮಹಾರಾಷ್ಟ್ರ ಎರಡು ರಾಜ್ಯದ ಪೊಲೀಸರು ಜಂಟಿಯಾಗಿ ಸಮರ ಸಾರಿದ್ದಾರೆ. ನೂರಕ್ಕೂ ಅಧಿಕ ಪೊಲೀಸರು ದಾಳಿ ನಡೆಸಿ ದಂಧೆಕೋರರ ಜನ್ಮ ಜಾಲಾಡುತ್ತಿದ್ದಾರೆ.
ಗಾಂಜಾ ಮೂಲ ಭೇದಿಸಲು ತೆರಳಿದ ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ 11 ಜನರ ತಂಡಕ್ಕೆ ಅಟ್ಟಾಡಿಸಿ ಹಲ್ಲೆಗೈದ ಗಾಂಜಾ ದಂಧೆಕೋರರು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇಲ್ಲಾಳ ಸ್ಥಿತಿ ಗಂಭೀರವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಮರ್ಗಾ ಪೊಲೀಸ್ ಠಾಣೆಯಲ್ಲಿ 40ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ ಇದನ್ನೂ ಓದಿ:ಕಲಬುರಗಿಗೆ ಬಂದ ಏರ್ ಆ್ಯಂಬುಲೆನ್ಸ್: ಇಂದು ಸಿಪಿಐ ಶ್ರೀಮಂತ ಇಲ್ಲಾಳ ಬೆಂಗಳೂರಿಗೆ ಏರ್ಲಿಫ್ಟ್
ನಿನ್ನೆ ಬೆಳಗ್ಗೆಯಿಂದಲೇ ಎರಡು ರಾಜ್ಯದ ಪೊಲೀಸರು ಜಂಟಿಯಾಗಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಬೀದರ್ ಎಸ್ಪಿ, ಕಲಬುರಗಿ ಜಿಲ್ಲೆಯ ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಸೇರಿದಂತೆ ರಾಜ್ಯದ ಅನೇಕ ಪೊಲೀಸರು ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರದ ಪೊಲೀಸರು ಕೂಡಾ ಸಂಪೂರ್ಣ ಬೆಂಬಲ ಕೊಟ್ಟಿದ್ದು, ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಉಮಗ್ರಾ ಜಿಲ್ಲೆಯ ತರೂರಿ ಹಾಗೂ ಕಲಬುರಗಿ ಜಿಲ್ಲೆಯ ಹೊನ್ನಾಳಿ ಸೇರಿ ಹಲವೆಡೆ ದಾಳಿ ನಡೆಸಿ 11 ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಇಶಾ ಪಂತ್ ಇದನ್ನೂ ಓದಿ:ಪೊಲೀಸರ ಮೇಲೆ ಗಾಂಜಾ ದಂಧೆಕೋರರ ಅಟ್ಟಹಾಸ: ಕಲಬುರಗಿ ಸರ್ಕಲ್ ಇನ್ಸ್ಪೆಕ್ಟರ್ ಸ್ಥಿತಿ ಚಿಂತಾಜನಕ
ಪಿಸ್ತೂಲ್, ಹಣ, ಚಿನ್ನಾಭರಣ ಮಾಯ: ಗಾಂಜಾ ಮೂಲ ಭೇದಿಸಲು ತೆರಳಿದ ಪೊಲೀಸರಿಗೆ ನೀರಿಕ್ಷೆಗೂ ಮೀರಿ ಅಲ್ಲಿ ಗಾಂಜಾ ಬೆಳೆದಿರುವುದು ಕಂಡುಬಂದಿತ್ತು. ಮಹಾರಾಷ್ಟ್ರ ಗಡಿಯಾದ್ದರಿಂದ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ, ಅವರ ಬರುವಿಕೆಗಾಗಿ ಕಾದು ಕುಳಿತ ಕರ್ನಾಟಕ ಪೊಲೀಸರ ಮೇಲೆ ಕಲ್ಲು, ಕಟ್ಟಿಗೆ ಸಮೇತ ದಾಳಿ ನಡೆಸಿದ ಸುಮಾರು 40 ಜನ ದುಷ್ಕರ್ಮಿಗಳ ತಂಡದಿಂದ ತಪ್ಪಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿದ್ದಾರೆ. ಈ ವೇಳೆ ಸಿಪಿಐ ಶ್ರೀಮಂತ ಇಲ್ಲಾಳ ಅವರು ತಮ್ಮ ಸರ್ವಿಸ್ ರಿವಾಲ್ವಾರ್ ತೆಗೆದು ಎರಡು ಸುತ್ತು ಗಾಳಿಯಲ್ಲಿ ಫೈರ್ ಮಾಡಿದ್ದರು.
ಗುಂಡು ಹಾರಿಸಿದರು ಹೆದರದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿ ಸಿಪಿಐ ಅವರ ಕೈಯಲ್ಲಿದ್ದ ಸರ್ವಿಸ್ ಪಿಸ್ತೂಲ್, ಕೊರಳಲಿದ್ದ ಚಿನ್ನದ ಸರ, ಬೆರಳಲ್ಲಿದ್ದ ಚಿನ್ನದ ಉಂಗುರ, ಹಣವನ್ನು ಕಸಿದುಕೊಂಡಿದ್ದಾರೆ. ಸರ್ವಿಸ್ ರಿವಾಲ್ವಾರ್ನಲ್ಲಿ ಎಂಟು ಜೀವಂತ ಗುಂಡು ಇದ್ದವು. ಪಿಸ್ತೂಲ್, ಹಣ, ಗುಂಡು ಎಲ್ಲವೂ ನಾಪತ್ತೆಯಾಗಿವೆ ಎಂದು ಎಸ್ಪಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ.