ಕಲಬುರಗಿ: ಮರಳು ಸಾಗಣೆ ವೇಳೆ ಟ್ಯಾಕ್ಟರ್ ಹರಿಸಿ ಹೆಡ್ಕಾನ್ಸ್ಟೇಬಲ್ ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ ಸಾಯಿಬಣ್ಣಾ ಕರಜಗಿ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಇಂದು ವಿಜಯಪುರ ಜಿಲ್ಲೆ ಆಲಮೇಲ ಬಳಿ ಸಾಯಿಬಣ್ಣ ಕರಜಗಿಯನ್ನು ಬಂಧಿಸಿ ಕಲಬುರಗಿಗೆ ಕರೆತರಲಾಗುತಿತ್ತು. ಮಾರ್ಗಮಧ್ಯೆ ಜೇರಟಗಿ ಮಂದೇವಾಲ ಬಳಿ ಮೂತ್ರವಿಸರ್ಜನೆಗೆ ನಿಂತಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಜೇವರ್ಗಿ ಪಿಎಸ್ಐ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ತನ್ನ ಕೃತ್ಯ ಮುಂದುವರಿಸಿದಾಗ ಆತ್ಮರಕ್ಷಣೆಗಾಗಿ ಪಿಎಸ್ಐ, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಜೇವರ್ಗಿ ತಾಲೂಕಿನ ಹುಲ್ಲೂರ್ ಚಕ್ಪೊಸ್ಟ್ ಬಳಿ ಟ್ರ್ಯಾಕ್ಟರ್ ಹರಿಸಿ ಜೂನ್ 15ರಂದು ಹೆಡ್ ಕಾನ್ಸ್ಟೇಬಲ್ ಮಯೂರ್ ಚೌಹಾನ್ (51) ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ಹಾಗೂ ಪ್ರಮುಖ ಆರೋಪಿ ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಸಿದ್ದಪ್ಪನನ್ನು ಬಂಧಿಸಲಾಗಿತ್ತು. ಕೃತ್ಯದ ನಂತರ ಪರಾರಿಯಾಗಿದ್ದ ಸಾಯಿಬಣ್ಣ ಕರಜಿಗಿಯನ್ನು ಇಂದು ಬಂಧಿಸಿ ಕರೆತರಲಾಗುತ್ತಿದೆ.
ಅಕ್ರಮ ಮರಳು ದಂಧೆಕೋರರ ಅಟ್ಟಹಾಸ:ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಯೂರ್ ಹತ್ಯೆ ಪ್ರಕರಣ ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಿದ್ದ ಪೊಲೀಸರು ಮತ್ತೋರ್ವ ಆರೋಪಿಗಾಗಿ ಬಲೆ ಬೀಸಿ ತೀವ್ರ ಶೋಧ ನಡೆಸುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಇಶಾ ಪಂತ್, ಮೂರು ತಂಡಗಳನ್ನು ರಚಿಸಿ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದರು. ಖಚಿತ ಮಾಹಿತಿ ಮೇರೆಗೆ ಇಂದು ಇಬ್ಬರು ಪಿಎಸ್ಐ ನೇತೃತ್ವದ ತಂಡ ವಿಜಯಪುರಕ್ಕೆ ತೆರಳಿ ಆಲಮೇಲ ಗ್ರಾಮದ ಜಮೀನೊಂದರಲ್ಲಿ ಅಡಗಿ ಕುಳಿತಿದ್ದ ಆರೋಪಿ ಸಾಯಿಬಣ್ಣನನ್ನು ಬಂಧಿಸಿದ್ದಾರೆ. ಮಾರ್ಗಮಧ್ಯೆ ಪಿಎಸ್ಐ ಬಸವರಾಜ ಚಿತ್ತಕೋಟೆ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಅಲರ್ಟ್ ಆದ ಜೇವರ್ಗಿ ಠಾಣೆ ಪಿಎಸ್ಐ ಸಂಗಮೇಶ್ ಅಂಗಡಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದ್ರೂ ಶರಣಾಗದ ಆರೋಪಿ ಸಾಯಿಬಣ್ಣ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.