ಕಲಬುರಗಿ: ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕಾರ ಮಾಡಿಸುವ ಕುತಂತ್ರ ನಡೆದಿದೆ ಎಂಬ ಸಂಸದ ಡಿಕೆ ಸುರೇಶ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ ಕುರಿತು ಅಫಜಲಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾಮಪತ್ರ ತಿರಸ್ಕಾರ ಮಾಡುವ ಕೆಲಸ ಬಿಜೆಪಿ ಮಾಡುವುದಿಲ್ಲ, ಅದು ಚುನಾವಣಾ ಆಯೋಗ ಮಾಡುತ್ತದೆ. ತಾವು ಮಾಡಿರುವ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಹಾಕುತ್ತಿದ್ದಾರೆ. ಅವರ ನಾಮಪತ್ರ ಎಲ್ಲವೂ ಕಾನೂನು ಪ್ರಕಾರ ಇದ್ದರೆ ಅವರೇಕೆ ಭಯಪಡಬೇಕು? ರಾಜಕೀಯವಾಗಿ ಕಾಂಗ್ರೆಸ್ನವರಲ್ಲಿ ಎಷ್ಟು ಅಸ್ಥಿರತೆ ಇದೆ ಎನ್ನುವುದು ಇದು ತೋರಿಸುತ್ತದೆ. ಕಾನೂನಾತ್ಮಕವಾಗಿ ಡಿಕೆಶಿ ನಾಮಪತ್ರ ರಿಜೆಕ್ಟ್ ಆಗಬಹುದು ಎನ್ನುವ ಭಯ ಅವರಲ್ಲಿ ಕಾಡುತ್ತಿದೆ. ಹಾಗಾಗಿ, ಡಿಕೆ ಸುರೇಶ್ ನಾಮಪತ್ರ ಸಲ್ಲಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಇದನ್ನು ಓದಿ:ಕಾಂಗ್ರೆಸ್ ಮೂಲಭೂತವಾದಿಗಳನ್ನು ಆಮದು ಮಾಡ್ತಿದೆ: ಸುಧಾಂಶು ತ್ರಿವೇದಿ ಗಂಭೀರ ಆರೋಪ
ಇಬ್ಬರು ಪಕ್ಷ ಬಿಟ್ಟರೆ ಲಿಂಗಾಯತ ವಿರೋಧಿ ಅನ್ನೋಕಾಗತ್ತಾ?ಲಿಂಗಾಯತ ಸಮುದಾಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷ ಬಿಟ್ಟಿರುವುದರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಪರಿಣಾಮ ಆಗೋದಿಲ್ಲ. ಇಬ್ಬರು ನಾಯಕರು ಪಕ್ಷ ಬಿಟ್ಟ ಕಾರಣ ಲಿಂಗಾಯತ ವಿರೋಧಿ ಅನ್ನೋಕಾಗಲ್ಲ. ನಾವು 70ಕ್ಕೂ ಹೆಚ್ಚು ಲಿಂಗಾಯತ ಮುಖಂಡರಿಗೆ ಟಿಕೆಟ್ ಕೊಟ್ಟಿದ್ದೇವೆ. ಯಡಿಯೂರಪ್ಪ ಅವರಂತಹ ಮೇರು ನಾಯಕರು ನಮ್ಮ ಜೊತೆ ಇದ್ದಾರೆ. ಲಿಂಗಾಯತ ಸೇರಿದಂತೆ ಎಲ್ಲ ಸಮುದಾಯವರು ನಮ್ಮ ಜೊತೆಗೆ ಇದ್ದಾರೆ. ಕಳೆದ ಬಾರಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್, ಜನರು ಇದನ್ನು ಮರೆತೆ ಬಿಡುತ್ತಾರಾ? ಬಿಜೆಪಿ ಲಿಂಗಾಯತ ವಿರೋಧಿ ಎನ್ನುವ ಅಪಪ್ರಚಾರದಲ್ಲಿ ಹುರುಳಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಆರೋಪ ತಳ್ಳಿ ಹಾಕಿದರು.