ಕಲಬುರಗಿ:ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆ ಕುರುಕ್ಷೇತ್ರ ಅಖಾಡ ರಂಗೇರಿದೆ. ಆಡಳಿತಾರೂಢ ಬಿಜೆಪಿ ಪಕ್ಷ ಎಲೆಕ್ಷನ್ನಲ್ಲಿ ದಿಗ್ವಿಜಯ ಸಾಧಿಸಲು ಅಬ್ಬರದ ಪ್ರಚಾರ ನಡೆಸಿದೆ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸುತ್ತ ಅಭ್ಯರ್ಥಿಗಳ ಪರ ಮತ ಬೇಟೆ ನಡೆಸ್ತಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿಯಲ್ಲಿ ಗುರುವಾರ ಸಿಎಂ ಪ್ರಚಾರ ನಡೆಸುತ್ತ ಎದುರಾಳಿಗಳ ವಿರುದ್ಧ ಅಬ್ಬರಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್ ಪರ ಸಿಎಂ ಬೊಮ್ಮಾಯಿ ಅಬ್ಬರದ ಪ್ರಚಾರ ನಡೆಸಿದರು. ನಾಮಪತ್ರ ಸಲ್ಲಿಕೆ ಹಿನ್ನೆಲೆ ನಗರದ ಶೆಟ್ಟಿ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗಿಯಾದ ಸಿಎಂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ಮೀಸಲಾತಿ ಹೆಚ್ಚಳ ಮುಂದಿಟ್ಟು ಬಿಜೆಪಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದ್ರು. ಸಿದ್ದರಾಮಯ್ಯ ಸರ್ಕಾರದ ಆಡಳಿತ ಮತ್ತು ಕಾಂಗ್ರೆಸ್ ವಿರುದ್ಧ ಸಿಎಂ ಗುಡುಗಿದ್ರು. ಕಾಂಗ್ರೆಸ್ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಜೇನುಗೂಡಿಗೆ ಕೈ ಹಾಕಬೇಡಿ ಅಂದ್ರು ಜೇನು ಹುಳ ಕಚ್ಚಿಸಿಕೊಂಡು ಜೇನಿನ ಸಿಹಿ ಕೊಟ್ಟಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ಹೆಚ್ಚಳ ರದ್ದು ಮಾಡ್ತೇವೆ ಅಂತಾ ಹೇಳ್ತಿದ್ದಾರೆ. ಮೀಸಲಾತಿ ಹೆಚ್ಚಳ ರದ್ದತಿಗೆ ಕೈ ಹಾಕಿದ್ರೆ ಸಾಮಾಜಿಕ ಕ್ರಾಂತಿ ಆಗುತ್ತೆ ಅಂತಾ ಕಾಂಗ್ರೆಸ್ಗೆ ಬೊಮ್ಮಾಯಿ ಖಡಕ್ ಎಚ್ಚರಿಕೆ ಕೊಟ್ರು.
ಇನ್ನು ಮಾತೇತ್ತಿದ್ರೆ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಯಾರಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ?, ಅಲ್ಪಸಂಖ್ಯಾತ, ಹಿಂದುಳಿದ ದೀನ ದಲಿತರನ್ನ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡರೇ ವಿನಹ ಅವರ ಉದ್ದಾರ ಮಾಡಿಲ್ಲ. ಕಾಂಗ್ರೆಸ್ಗೆ ಒಂದೂ ವೋಟ್ ಕೊಡಬಾರದು. ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ಅಫಜಲಪುರ ಹುಲಿ ಮಾಲೀಕಯ್ಯರನ್ನು ಗೆಲ್ಲಿಸಿ ಅಂತಾ ಕ್ಷೇತ್ರದ ಮತದಾರರಲ್ಲಿ ಸಿಎಂ ಮನವಿ ಮಾಡಿದ್ರು.