ಕಲಬುರಗಿ:ಮೂವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮ ಪಂಚಾಯತಿಯ ಮೂವರು ಸದಸ್ಯರನ್ನು ಅಪಹರಿಸಿಕೊಂಡು ಹೋಗಲಾಗಿದ್ದು, ಈ ಕುರಿತು ಯಲಗೋಡ ಗ್ರಾಮ ಪಂಚಾಯಿತಿ ಸದಸ್ಯ ಮಹ್ಮದ್ ರಫೀಕ್ ಪಟೇಲ್ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಗಸ್ಟ್ 2 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಹ್ಮದ್ ರಫೀಕ್ ಪಟೇಲ್ ಅವರು 7 ಜನ ಸದಸ್ಯರನ್ನು ಕರೆದುಕೊಂಡು ಬಂದು ನಗರದ ಬಾಬಾ ಗೆಸ್ಟ್ ಹೌಸ್ನಲ್ಲಿ ಮೂರು ದಿನಗಳಿಂದ ತಂಗಿದ್ದರು. ನಿನ್ನೆ 2.25 ಸುಮಾರಿಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ 8 ರಿಂದ 10 ಜನರಿದ್ದ ತಂಡ, ಗೆಸ್ಟ್ ಹೌಸ್ ರೂಮಿಗೆ ನುಗ್ಗಿ ಕಾಶಿರಾಯ ಬಿರಾದಾರ, ಬಸವಲಿಂಗಪ್ಪ ಜಾಯಿ ಮತ್ತು ಪ್ರಕಾಶ ರಾಠೋಡ್ ಎಂಬುವವರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಉಳಿದ ನಾಲ್ವರು ಸದಸ್ಯರು ಚೀರಾಡಿದರೂ ರಕ್ಷಣೆ ಮಾಡಲು ಆಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ರೂಪಾ ಹಸಕಿ ಅವರ ಪತಿ ಚಂದ್ರಶೇಖರ ಹಸಕಿ ಅವರೇ ಮೂವರು ಸದಸ್ಯರನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿರುವ ಮಹ್ಮದ್ ರಫೀಕ್ ಪಟೇಲ್, ಅಪಹರಣಕ್ಕೊಳಗಾಗಿರುವ ಮೂವರು ಸದಸ್ಯರನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಬೈಕ್ ಮೇಲೆ ಬಂದು ವಿದ್ಯಾರ್ಥಿನಿ ಕೊರಳಲ್ಲಿದ್ದ ಚೈನ್ ಕಿತ್ತುಕೊಂಡು ಪರಾರಿ: ಗೆಳತಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಕೊರಳಲ್ಲಿದ್ದ ಚಿನ್ನದ ಚೈನ್ ಕಿತ್ತುಕೊಂಡು ಸರಗಳ್ಳರಿಬ್ಬರು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. ನಗರದ ಕಾಲೇಜೊಂದರಲ್ಲಿ ಬಿ.ಕಾಂ. ಅಂತಿಮ ವರ್ಷದಲ್ಲಿ ಓದುತ್ತಿರುವ ಚಿತ್ತಾಪುರ ತಾಲ್ಲೂಕಿನ ಮಾಲಗತ್ತಿ ಗ್ರಾಮದ ನಾಗವೇಣಿ ಗೋಂಘಡೆ, ಪಿಡಿಎ ಕಾಲೇಜು ಎದರುಗಡೆ ಇರುವ ಬೇಕರಿಯಿಂದ ಬ್ರೆಡ್ ತೆಗೆದುಕೊಂಡು ಗೆಳತಿ ಜೊತೆಗೆ ಪಿಜಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಹಿಂದಿನಿಂದ ಬಜಾಜ್ ಪಲ್ಸರ್ ಬೈಕ್ ಮೇಲೆ ಬಂದ 25 ರಿಂದ 30 ವರ್ಷ ವಯಸ್ಸಿನ ಇಬ್ಬರು ಯುವಕರು ನಾಗವೇಣಿ ಅವರ ಕೊರಳಲ್ಲಿದ್ದ 30 ಸಾವಿರ ರೂ. ಮೌಲ್ಯದ 5 ಗ್ರಾಂ ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳರ ಬಂಧನಕ್ಕೆ ಪೊಲೀಸರು ಶೋಧಕಾರ್ಯ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ:Student murder case: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿ ಹತ್ಯೆ ಕೇಸ್; ರೌಡಿಶೀಟರ್ ಸೇರಿ 6 ಆರೋಪಿಗಳ ಬಂಧನ