ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮಾಹಿತಿ ನೀಡಿದರು. ಕಲಬುರಗಿ:ಬ್ಯೂಟಿಷಿಯನ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆಕೆಯನ್ನು ಕೊಲೆ ಮಾಡಿದ್ದು ಎರಡನೇ ಪತಿಯಲ್ಲ, ಮೊದಲನೇ ಪತಿ ಎನ್ನುವ ಶಾಕಿಂಗ್ ವಿಚಾರ ಬಯಲಿಗೆ ಬಂದಿದೆ. ತಾನೇ ಕೊಲೆ ಮಾಡಿ ಎರಡನೇ ಪತಿಯ ಮೇಲೆ ಹಾಕಿ ಅಮಾಯಕನಂತೆ ನಾಟವಾಡಿದ ಆರೋಪಿಯನ್ನು ಅಶೋಕ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ 21 ರಂದು ಬಸ್ ನಿಲ್ದಾಣ ಬಳಿಯ ಶಾಂತಿ ನಗರದ ಮನೆಯೊಂದರಲ್ಲಿ ಬ್ಯೂಟಿಷಿಯನ್ ಶಾಹಿನಾ ಬಾನು (35) ಕುತ್ತಿಗೆಗೆ ವೆಲ್ನಿಂದ ಬಿಗಿದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಆಕೆಯ ಎರಡನೇ ಪತಿಯ ಮೇಲೆ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದರು. ಆದ್ರೆ, ಅಮಾಯಕನಂತೆ ಕೊಲೆ ನಡೆದ ಸ್ಥಳದಲ್ಲಿಯೇ ಇದ್ದ. ಮೊದಲನೇ ಪತಿಯೇ ಕೊಲೆ ಪ್ರಕರಣದ ಆರೋಪಿ ಎನ್ನುವ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ. ಶಾಹಿನಾ ಬಾನು ಮೊದಲನೇ ಪತಿ ಸೈಯದ್ ಜಿಲಾನಿ ಬಂಧಿತ ಆರೋಪಿ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ತಿಳಿಸಿದ್ದಾರೆ.
ಆರೋಪಿ ಸೈಯದ್ ಜಿಲಾನಿ ಜೊತೆ ಶಾಹಿನಾ ಬಾನು ವಿವಾಹವಾಗಿದ್ದು, ಒಂದು ಗಂಡು ಮಗು ಸಹ ಇದೆ. ಇಬ್ಬರ ನಡುವೆ ಕೌಟುಂಬಿಕ ಹೊಂದಾಣಿಕೆ ಇಲ್ಲದ ಕಾರಣ ವಿಚ್ಛೇದನ ಪಡೆದಿದ್ದರು. ಶಾಹಿನಾ ಬಾನು ಜೊತೆಗೆ ವಿಚ್ಛೇದನ ಪಡೆದ ಸೈಯದ್ ಜಿಲಾನಿ ಆಕೆಯ ಸಹೋದರಿಯನ್ನು ಮದುವೆ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಇತ್ತ ಶಾಹಿನಾ ಬಾನು ಕಲಬುರಗಿಯ ಮಹಿಬೂಬ್ ನಗರದ ಶೇಕ್ ಹೈದರ್ ಎಂಬಾತನೊಂದಿಗೆ ಎರಡನೇ ಮದುವೆಯಾಗಿ ಐದಾರು ವರ್ಷಗಳಿಂದ ಸಂಸಾರ ನಡೆಸಿದ್ದಾಳೆ. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಪತ್ನಿ ಮೇಲೆ ಸಂಶಯ ಪಟ್ಟು ಇತ್ತೀಚಿಗಷ್ಟೇ ಶೇಕ್ ಹೈದರ್ ಕೂಡ ಆಕೆಯನ್ನು ಬಿಟ್ಟು ಹೋಗಿದ್ದನು. ಬಿಟ್ಟು ಹೋಗುವಾಗ ಶೇಖ್ ಹೈದರ್ ತನ್ನೊಂದಿಗೆ ಮಗಳನ್ನು ಕರೆದೊಯ್ದಿದ್ದ. ಆದ್ರೆ ನ್ಯಾಯಾಲಯದ ಮುಖಾಂತರ ಶಾಹಿನಾ ಬಾನು ತನ್ನ ಮಗಳನ್ನು ಸುಪರ್ದಿಗೆ ಪಡೆದು ತನ್ನ ತಾಯಿಯ ಬಳಿ ಬಿಟ್ಟಿದ್ದಳು.
ಪೊಲೀಸ್ ತನಿಖೆ ವೇಳೆ ಮಾಹಿತಿ ಬಹಿರಂಗ:ತಾನು ಮಾತ್ರ ಒಬ್ಬಂಟಿಯಾಗಿ ಶಾಂತಿ ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದಳು. ಮಗಳನ್ನು ಕಸಿದುಕೊಂಡ ಕೋಪದಲ್ಲಿ ಎರಡನೇ ಪತಿಯೇ ಕೊಲೆ ಗೈದಿದ್ದಾನೆ ಎಂದು ಮೃತಳ ತಾಯಿ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದರು. ಆದ್ರೆ, ಪೊಲೀಸ್ ತನಿಖೆ ವೇಳೆ ಎರಡನೇ ಪತಿ ಆರೋಪಿ ಅಲ್ಲ. ಬದಲಿಗೆ ಮೊದಲನೇ ಪತಿಯೇ ಕೊಲೆ ಆರೋಪಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ.. ಯಾದಗಿರಿಯಲ್ಲಿಯೂ ಮೂವರು ಪೊಲೀಸ್ ವಶಕ್ಕೆ