ಹಾವೇರಿ:ವಿನಾಕಾರಣ ಗರ್ಭಕೋಶ ಶಸ್ತ್ರಚಿಕಿತ್ಸೆಗೊಳಗಾದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರು, ಸರ್ಕಾರ ತಮಗೆ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಿದರು. ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 8 ವರ್ಷಗಳಿಂದ ಈ ಕುರಿತಂತೆ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರದಿಂದ ಭರವಸೆ ನೀಡಿದ್ದು ಬಿಟ್ಟರೆ, ಪರಿಹಾರ ಘೋಷಣೆಯಾಗಿಲ್ಲ ಎಂದು ಆರೋಪಿಸಿದರು.
ರಾಣೆಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪಿ.ಶಾಂತಾ ಎಂಬ ವೈದ್ಯೆ ಮಹಿಳೆಯರು ಯಾವುದೇ ಸಮಸ್ಯೆ ಇದ್ದರೂ ಗರ್ಭಕೋಶ ಕತ್ತರಿಸಬೇಕು ಎಂದು ಸಲಹೆ ನೀಡುತ್ತಿದ್ದರು. ಇದೇ ರೀತಿ ಅವಶ್ಯಕತೆ ಇಲ್ಲದ 1,722 ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿದ್ದರು. ಡಾ.ಪಿ.ಶಾಂತಾ ಮದುವೆಯಾಗದ ಯುವತಿಯರ ಗರ್ಭಕೋಶ ತೆಗೆದಿದ್ದರು. ಪಿ.ಶಾಂತಾ ಮತ್ತು ಖಾಸಗಿ ಮೆಡಿಕಲ್ ಶಾಪ್ ಸೇರಿ ಮಹಿಳೆಯರಿಗೆ ವಂಚನೆ ಮಾಡಿದ್ದರು ಎಂಬ ಪ್ರತಿಭಟನಾನಿರತರು ದೂರಿದರು.
ಶಾಂತಾ ಅವರು ಮಾಡಿದ ಶಸ್ತ್ರಚಿಕಿತ್ಸೆಯಿಂದ ತಾತ್ಕಾಲಿಕವಾಗಿ ಆರೋಗ್ಯ ಸುಧಾರಣೆ ಕಂಡ ಮಹಿಳೆಯರು ನಂತರ ಹಲವು ಸಮಸ್ಯೆಗಳಿಗೆ ಒಳಗಾಗಿದ್ದರು. ಈ ಕುರಿತಂತೆ ಬೇರೆ ವೈದ್ಯರ ಹತ್ತಿರ ತೋರಿಸಿದಾಗ ಶಾಂತಾ ಅನಾವಶ್ಯಕವಾಗಿ ಮಹಿಳೆಯರ ಗರ್ಭಕೋಶ ತೆಗೆದು ಹಾಕಿರುವ ಅಂಶ ಬೆಳಕಿಗೆ ಬಂದಿತ್ತು. ಅಂದಿನಿಂದ ಗರ್ಭಕೋಶ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯರು ಹೋರಾಟದ ಹಾದಿ ಹಿಡಿದಿದ್ದರು.