ಕುಷ್ಟಗಿ: ಜನವರಿ 6ರಿಂದ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆ ನಡೆಯಲಿದೆ. ಇದರ ಅಂಗವಾಗಿ ಮಾತೃಭಾಷೆಯ ಕುರಿತು ಜಾಗೃತಿ ಮೂಡಿಸಲು ಹಾಗೂ ಸಮ್ಮೇಳನದ ಯಶಸ್ವಿಗೆ ಇಳಕಲ್ಲ ಬೈಕ್ ಸಾಹಸಿ ವೀರಣ್ಣ ಕುಂದರಗಿಮಠ ವಿಶೇಷ ಬೈಕ್ ಸಾಹಸ ಕೈಗೊಂಡಿದ್ದಾರೆ. ಹ್ಯಾಂಡಲ್ ಇಲ್ಲದ ಬೈಕ್ನಲ್ಲಿ ಕನ್ನಡ ಧ್ವಜ ಹಿಡಿದು ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಹಾವೇರಿಗೆ 360 ಕಿಮೀ ದೂರದ ಪ್ರಯಾಣ ಬೆಳೆಸಿದ್ದಾರೆ.
ಇಳಕಲ್ಲ ಮೂಲದ ಕೃಷಿ ಕುಟುಂಬದಲ್ಲಿ ಜನಿಸಿದ ವೀರಣ್ಣ ಕುಂದರಗಿಮಠ ಬೆಳಗ್ಗೆ 7:30ಕ್ಕೆ ಜಿಲ್ಲಾಡಳಿತ ಭವನದಿಂದ ಹುನಗುಂದ, ಇಳಕಲ್ಲ, ಕುಷ್ಟಗಿ, ಗದಗ, ಹುಬ್ಬಳ್ಳಿ ಬಂಕಾಪೂರ ಚೌಕ, ಶಿಗ್ಗಾವಿ, ಹಾನಗಲ್ ಮೂಲಕ ಸಾಗಿ ಹಾವೇರಿಯ ಸಮ್ಮೇಳನ ಸ್ಥಳ ತಲುಪುವ ನಿಗದಿತ ಗುರಿಯೊಂದಿಗೆ ಈ ಪಯಣ ಶುರು ಮಾಡಿದ್ದಾರೆ. ಮಾರ್ಗದುದ್ದಕ್ಕೂ ಇವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನರು ಹೂವಿನ ಹಾರ ಹಾಕಿ, ಸಿಹಿ ತಿನಿಸುವ ಮೂಲಕ ಶುಭ ಹಾರೈಸುತ್ತಿದ್ದಾರೆ.
ಬೈಕ್ ಸಾಹಸಿ ವೀರಣ್ಣ ಕುಂದರಗಿಮಠ ಮಾತನಾಡಿ, 'ಹ್ಯಾಂಡಲ್ ಇಲ್ಲದ ಬೈಕ್ ಓಡಿಸುವ ಮೂಲಕ ಕನ್ನಡ ನಾಡು, ನುಡಿಯ ಕುರಿತು ಜಾಗೃತಿ ಮೂಡಿಸುವ ವಿಶೇಷ ಕಾರ್ಯ ಹಮ್ಮಿಕೊಂಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರವಿದೆ. ಹೋದ ಕಡೆಗಳಲ್ಲಿ ಜನರು ಪ್ರೋತ್ಸಾಹಿಸುತ್ತಿದ್ದಾರೆ. ಈ ಬೈಕ್ ಅನ್ನು ತಾಳ್ಮೆ, ತಾಂತ್ರಿಕತೆ ಸಮತೋಲನದಿಂದ ಚಲಾಯಿಸುತ್ತಿರುವೆ. ಮಳೆ, ಗಾಳಿ ಸಂದರ್ಭದಲ್ಲಿ ಇಂಥ ಸಾಹಸ ಸಾಧ್ಯವಿಲ್ಲ. ಹೀಗಾಗಿ, ನಿಧಾನವಾಗಿ ಹ್ಯಾಂಡಲ್ ಇಲ್ಲದ ಬೈಕ್ನೊಂದಿಗೆ ಹಾವೇರಿವರೆಗೂ ಹೊರಟಿದ್ದೇನೆ. ಬೈಕ್ ಮೇಲೆ ವೀರಗಂಗಾಧರ ಶ್ರೀ, ಹಾನಗಲ್ ಕುಮಾರಸ್ವಾಮಿ, ಸಿದ್ಧಗಂಗಾ ಶ್ರೀ, ಗದುಗಿನ ಪುಟ್ಟರಾಜ ಇಳಕಲ್ಲ ಮಹಾಂತ ಶಿವಯೋಗಿಗಳ ಭಾವಚಿತ್ರದ ಜೊತೆಗೆ ದಿ.ಪುನೀತ್ ರಾಜ್ಕುಮಾರ್ ಅವರ ಫೋಟೋಗಳನ್ನು ಅಳವಡಿಸಿಕೊಂಡಿದ್ದೇನೆ. ಸೋಮವಾರ ರಾತ್ರಿ ( ಜ.2) ವಿಜಯಪುರದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾದ ವಿಷಯ ಕೇಳಿ ಅವರ ಚಿತ್ರವನ್ನೂ ಸಹ ಹಾಕಿದ್ದೇನೆ. ಅವರಿಗೆ ಶ್ರದ್ಧಾಂಜಲಿ ಪೂರ್ವಕವಾಗಿ ಫಲ, ನೀರು ಮಾತ್ರ ಸೇವಿಸಿ ಈ ಯಾತ್ರೆ ಕೈಗೊಂಡಿದ್ದೇನೆ' ಎಂದರು.