ಹಾವೇರಿ:ಮತಕ್ಕಾಗಿ ಪಾಕಿಸ್ತಾನವನ್ನ ಸೇರಿಸುತ್ತೇವೆ ಅನ್ನುವುದಲ್ಲ. ನಿಮಗೆ ನಿಜವಾಗಿಯೂ ಭಾರತಮಾತೆಯ ಮೇಲೆ ಕಾಳಜಿ ಇದ್ದರೆ ಪಾಕಿಸ್ತಾನವನ್ನ ಸೇರಿಸಿ ಅಖಂಡ ಭಾರತ ಮಾಡಿ ಎಂದು ಮಾಜಿ ಸಚಿವ ಯು. ಟಿ. ಖಾದರ್ ಕುಟುಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ದಾವುದ್ ಇಬ್ರಾಹಿಂನನ್ನ ಹಿಡಿದು ತರುತ್ತೇವೆ ಎಂದಿದ್ದರು. ಅಧಿಕಾರಕ್ಕೆ ಬಂದು ಆರು ವರ್ಷವಾದರೂ ದಾವುದ್ ಇಬ್ರಾಹಿಂನನ್ನ ಭಾರತಕ್ಕೆ ತರಲಾಗಿಲ್ಲ. ದೇಶದಲ್ಲಿನ ಆಡಳಿತ ನೋಡಿದರೆ ಇಲ್ಲಿ ಪ್ರಜಾಪ್ರಭುತ್ವ ಇಲ್ಲ. ಬದಲಿಗೆ ಫ್ಯಾಸಿಸ್ಟ್ ಸರ್ಕಾರವಿದೆ ಎಂದು ಖಾದರ್ ಆರೋಪಿಸಿದರು.
ನಿಜವಾಗಿ ಕಾಳಜಿ ಇದ್ದರೆ ಪಾಕಿಸ್ತಾನವನ್ನ ಭಾರತಕ್ಕೆ ಸೇರಿಸಿ.. ಡಿಕೆಶಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡ ತಳ್ಳಿಹಾಕಿದ ಖಾದರ್, ಇದರ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದರು. ನೆರೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಚಿಕ್ಕ ಮಕ್ಕಳ ಜೊತೆ ಆಟವಾಡಲು ಸಮಯ ಇರುತ್ತೆ. ಆದರೆ, ಕರ್ನಾಟಕದ ನೆರೆ ವೀಕ್ಷಣೆಗೆ ಸಮಯ ಇರುವುದಿಲ್ಲ. ರಾಜ್ಯ ಬಿಜೆಪಿ ನಾಯಕರು, ಸಂಸದರಿಗೆ ಮೋದಿ ಅಮಿತ್ ಶಾ ಜೊತೆ ಮಾತನಾಡಲು ಸಹ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೇ 24 ರಿಂದ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ಖಾದರ್ ತಿಳಿಸಿದರು.
ಕೇಂದ್ರ ಸರ್ಕಾರ ಸಂವಿಧಾನದಲ್ಲಿ 370ನೇ ವಿಧಿಯನ್ನು ರದ್ದು ಮಾಡಿದೆ, ಆದರೆ ಜಮ್ಮು ಕಾಶ್ಮೀರದಲ್ಲಿನ ಸಮಸ್ಯೆಗಳ ಬಗ್ಗೆ ಅಲ್ಲಿನ ಮೂಲ ನಿವಾಸಿಗಳಿಗೆ ಮಾತ್ರ ಗೊತ್ತಿದೆ. ಕೇಂದ್ರ ಸರ್ಕಾರ ಕಾಶ್ಮೀರ ಸಮಸ್ಯೆಗಳನ್ನು ಅರಿಯದೆ 370ನೇ ವಿಧಿಯನ್ನು ರದ್ದು ಮಾಡಿದೆ. ದೇಶದಲ್ಲಿ ಎಲ್ಲರೂ ಶಾಂತಿ, ಒಗ್ಗಟ್ಟು ಬಯಸುತ್ತಾರೆ. ಆದರೆ ಇತ್ತೀಚೆಗೆ ರಾಜಕೀಯ ಬಳಸಿ ಒಂದು ಕೋಮುವನ್ನು ಸಂಘರ್ಷಕ್ಕೆ ಇಳಿಸುವಂತಾಗಿದೆ. ಇದು ಆಗಬಾರದು ದೇಶದಲ್ಲಿ ಎಲ್ಲರೂ ಒಂದೇ ಎಂಬ ಭಾವನೆಗಳನ್ನು ಬೆಳೆಸಲು ಮುಂದಾಗಬೇಕು ಎಂದರು.