ರಾಜ್ಯ ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಆಕ್ರೋಶ ಹಾವೇರಿ :ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ನಡೆಸುವ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಜ್ಯದಲ್ಲಿ ಅಧಿಕಾರ ನಡೆಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೇ ಇದಕ್ಕೆ ಜನರು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಶಿಗ್ಗಾಂವಿ ತಾಲೂಕು ತಡಸ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ವಿಕಸಿತ ಭಾರತ ಮಾಡಲು ಹೊರಟರೆ ರಾಜ್ಯ ಕಾಂಗ್ರೆಸ್ನವರು ತುಷ್ಟೀಕರಣದ ರಾಜಕಾರಣ ಮೂಲಕ ಸಂಕುಚಿತ ಭಾರತ ಮಾಡಲು ಹೊರಟಿದ್ದಾರೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದ ಆರೋಪಿಗಳನ್ನು ಅಮಾಯಕರು ಎಂದು ಹೇಳಿದ್ದಾರೆ. ಈ ಪ್ರಕರಣಗಳ ಸಾಕ್ಷಿಗಳನ್ನು ವೀಕ್ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದನ್ನು ನೋಡಿದರೆ ಸಿದ್ದರಾಮಯ್ಯ ತಾಲಿಬಾನ್ ರೀತಿ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಭಾರತೀಯರ ರಕ್ತ ಮತ್ತು ಪರಂಪರೆಯಲ್ಲಿ ಪ್ರಜಾಪ್ರಭುತ್ವವಿದೆ. ಈ ರೀತಿ ಮಾಡಲು ಹೋದರೆ ಜನರು ನಿಮ್ಮನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸುತ್ತಾರೆ ಎಂದು ಕಾಂಗ್ರೆಸ್ ಹರಿಹಾಯ್ದರು.
ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಬಂಧನದಲ್ಲಿ ಜೋಶಿ ಅವರ ಪಾತ್ರವಿದೆ ಎಂಬ ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಕಾಂಗ್ರೆಸ್ ಸರ್ಕಾರದಲ್ಲಿ ಅವರ ಮಾತು ನಡೆಯುವುದಿಲ್ಲ. ನನ್ನ ಮಾತು ನಡೆಯುತ್ತದೆ ಎನ್ನುವಂತಿದೆ ಅವರ ಹೇಳಿಕೆ. ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಅಮಾಯಕರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲು ಯಾವ ಯಾವ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತೋ ಅವಾಗ ಮುಂದಾಗಿದೆ. ಆಗ ಶೆಟ್ಟರ್ ಅವರೇ ಸಿಎಂ, ಸಚಿವ ಮತ್ತು ಪ್ರತಿಪಕ್ಷ ನಾಯಕರಾಗಿದ್ದರು. ಆಗ ತೆಗೆಯುವ ಅಧಿಕಾರ ಇವರಿಗೇ ಇತ್ತು. ಏಕೆ ಸಹಿ ಮಾಡಿಲ್ಲ. ಕಾಂಗ್ರೆಸ್ಗೆ ಹೋಗಿ ಹತಾಶೆಯಿಂದ ಈ ರೀತಿ ಬಾಲಿಶವಾದ ಹೇಳಿಕೆ ನೀಡುತ್ತಿದ್ದಾರೆ. ಅಂತಹ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಮೇಲೆ ಒಂದೂ ಕೇಸ್ ಇಲ್ಲ. ನೀವು ಕ್ಷಮೆ ಕೇಳುತ್ತೀರಾ? 16 ಕೇಸ್ ಎಂದು ಯಾರು ರಿಪೋರ್ಟ್ ನೀಡಿದ್ದಾರೋ ಅವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ಸಿಎಂಗೆ ಕೇಂದ್ರ ಸಚಿವ ಜೋಶಿ ಪ್ರಶ್ನಿಸಿದರು.
ಇದನ್ನೂ ಓದಿ :ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ: ಬಸವರಾಜ ಬೊಮ್ಮಾಯಿ