ಹಾವೇರಿ:ಜಮೀನಿನಲ್ಲಿ ಬೆಳೆದು ನಿಂತಿದ್ದ ಈರುಳ್ಳಿ ಬೆಳೆಯನ್ನು ರಾತ್ರಿ ವೇಳೆ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಯಲಗಚ್ಚ ಗ್ರಾಮದಲ್ಲಿ ನಡೆದಿದೆ. ರೈತ ಮಾದೇವಪ್ಪ ಹಳೇರಿತ್ತಿ ಬೆಳೆ ಕಳೆದುಕೊಂಡಿದ್ದಾರೆ.
ಮಾದೇವಪ್ಪ ತಮ್ಮ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಜಮೀನಿನಲ್ಲಿದ್ದು ಬೆಳೆಯನ್ನು ಜೋಪಾನ ಮಾಡಿದ್ದರು. ವಿದ್ಯುತ್ ಕಣ್ಣಾಮುಚ್ಚಾಲೆಯ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದಿದ್ದರು.
ಕಳೆದ ಕೆಲವು ದಿನಗಳ ಹಿಂದಷ್ಟೇ ಈರುಳ್ಳಿ ಬೆಳೆಯ ಮೊದಲ ಹಂತದ ಕಟಾವು ಮಾಡಿದ್ದ ಮಾದೇವಪ್ಪ, ಬೆಂಗಳೂರಿನ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಮೂರೂವರೆ ಸಾವಿರ ರೂಪಾಯಿಯಂತೆ ಮಾರಾಟ ಮಾಡಿದ್ದರು. ಜಮೀನಿನಲ್ಲಿ ಸುಮಾರು 50 ರಿಂದ 60 ಸಾವಿರ ರೂಪಾಯಿ ಈರುಳ್ಳಿ ಬೆಳೆ ಇತ್ತು. ಈರುಳ್ಳಿ ಕಳ್ಳತನ ಮಾಡುವ ಅನುಮಾನವಿದ್ದ ರೈತ ಪ್ರತಿದಿನ ರಾತ್ರಿ ಜಮೀನಿನಲ್ಲೇ ಮಲಗುತ್ತಿದ್ದರು. ಆದರೆ ರೈತ ಇನ್ನೊಂದು ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮಷಿನ್ಗೆ ಹಾಕಿಸಿ ಅದನ್ನು ಕಾಯಲು ಅಲ್ಲಿಯೇ ಮಲಗಿಕೊಂಡಿದ್ದರು. ಇದನ್ನು ಗಮನಿಸಿದ ಕಳ್ಳರು ರಾತ್ರಿ ಜಮೀನಿಗೆ ನುಗ್ಗಿ ಈರುಳ್ಳಿ ಕಳ್ಳತನ ಮಾಡಿದ್ದಾರೆ.