ಹಾವೇರಿ : ಜಿಲ್ಲೆಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಏಲಕ್ಕಿ ನಗರಿಯಲ್ಲಿ ಇದೇ ಪ್ರಥಮ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇನ್ನು ಸಮ್ಮೇಳನಕ್ಕೆ ಆಗಮಿಸುವ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ತ್ರೀಶಕ್ತಿ ಸಮಿತಿ ಸಿದ್ಧವಾಗಿದೆ.
ಮಹಿಳೆಯರಿಗೆ ಸೇವೆ ಸಲ್ಲಿಸಲು ಸ್ತ್ರೀ ಶಕ್ತಿ ಸಮಿತಿ: ಈ ಸ್ತ್ರೀ ಶಕ್ತಿ ಸಮಿತಿಯಲ್ಲಿ ಸುಮಾರು 500ಕ್ಕೂ ಅಧಿಕ ಸ್ವಯಂ ಸೇವಕಿಯರಿದ್ದಾರೆ. ಇವರು ಸಮ್ಮೇಳನಕ್ಕೆ ಬರುವ ಮಹಿಳೆಯರಿಗೆ ಸೇವೆ ನೀಡಲಿದ್ದಾರೆ. ಇನ್ನು ಸಮಿತಿಯ 500 ಜನ ಸ್ವಯಂ ಸೇವಕಿಯರು ಒಂದೇ ಬಣ್ಣದ ಸೀರೆಯುಟ್ಟು ಸಮ್ಮೇಳನಕ್ಕೆ ಬರುವ ಮಹಿಳೆಯರನ್ನು ಸ್ವಾಗತಿಸಲಿದ್ದಾರೆ. ಸಮ್ಮೇಳನಕ್ಕೆ ಬರುವ ಮಹಿಳೆಯರ ಆರೋಗ್ಯ, ವಸತಿ, ಆಹಾರ ಮತ್ತು ನೀರು ಸೇರಿದಂತೆ ಯಾವುದೇ ಸೇವೆಗಳಿಗೆ ಕೊರತೆಯಾಗದಂತೆ ಮಹಿಳೆಯರ ಸಂಘ ನೋಡಿಕೊಳ್ಳಲಿದೆ.
ಮಹಿಳಾ ಸ್ವಯಂ ಸೇವಕರಿಂದ ವಿಶೇಷ ಕಾಳಜಿ: ಇನ್ನು, ಸಮಿತಿಯು ಮಹಿಳೆಯರ ಅನುಕೂಲಕ್ಕಾಗಿ ವಾಹನಗಳ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಸಮ್ಮೇಳನಕ್ಕೆ ಬರುವ ಮಹಿಳಾ ಸಾಹಿತಿಗಳಿಗೆ ಮಹಿಳಾ ಲೇಖಕಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿರುವುದಾಗಿ ಸಮಿತಿಯ ಸದಸ್ಯೆಯರು ತಿಳಿಸಿದ್ದಾರೆ. ಮಹಿಳೆಯರ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಸ್ವಯಂ ಸೇವಕಿಯರು ವಿಶೇಷ ಕಾಳಜಿ ವಹಿಸಲಿದ್ದಾರೆ.