ರಾಣೆಬೆನ್ನೂರು: ಇಲ್ಲಿನ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳಿಗೆ ನವೆಂಬರ್ 1ರಂದು ಚುನಾವಣೆ ನಿಗದಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಲು ಹಾವೇರಿಯ ಉಪವಿಭಾಗಾಧಿಕಾರಿಗಳನ್ನು ಚುನಾವಣಾಧಿಕಾರಿಯನ್ನಾಗಿ ನಿಯೋಜಿಸಿದ್ದಾರೆ. ನಗರಸಭೆಯ ಸದಸ್ಯರಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಚುನಾವಣೆಯ ಸಭೆಯನ್ನು ನವೆಂಬರ್ 1 ರಂದು ಕರೆಯಲಾಗಿದೆ. ಈಗಾಗಲೇ ಸಭೆಗೆ ಹಾಜರಾಗುವಂತೆ 35 ಸದಸ್ಯರಿಗೆ ನೋಟಿಸ್ ನೀಡಲಾಗಿದೆ.
ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಜಿದ್ದಾಜಿದ್ದಿ: ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಕೆಪಿಜೆಪಿ ಸದಸ್ಯರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಅಲ್ಲದೇ ಬಿಜೆಪಿ ಮತ್ತು ಕಾಂಗ್ರೆಸ್ ಹಿರಿಯ ನಾಯಕರು ತೆರೆ ಮರೆಯ ಕಸರತ್ತು ಮಾಡುತ್ತಿದ್ದಾರೆ. ಇತ್ತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆಯಾ ಮೀಸಲಾತಿ ವ್ಯಾಪ್ತಿಯ ನಗರಸಭಾ ಸದಸ್ಯರು ಅಧಿಕಾರದ ಗದ್ದುಗೆ ಏರಲು ಲಾಬಿ ಆರಂಭಿಸಿದ್ದಾರೆ.
ಮಹಿಳೆಯರ ಕಾರುಬಾರ: ನಗರಸಭೆ ಅಧ್ಯಕ್ಷ ಬಿಸಿಎ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿದೆ. ಒಟ್ಟಿನಲ್ಲಿ ಯಾರೇ ಆದರೂ ಮಹಿಳಾ ಮಣಿಗಳೆ ಈ ಬಾರಿ ನಗರಸಭಾ ಗದ್ದುಗೆ ಹಿಡಿಯುತ್ತಾರೆ ಎಂಬುದು ವಿಶೇಷ.