ಹಾವೇರಿ: ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸಮಾಧಾನದ ಹೊಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎಂ ಹಿರೇಮಠ್ಗೆ ಟಿಕೆಟ್ ತಪ್ಪಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿರೇಮಠ್ : ಕಳೆದ 30 ವರ್ಷದಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ನಾಲ್ಕು ವರ್ಷದಿಂದ ಪಕ್ಷದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಮಧ್ಯೆ ಬೇಡ ಜಂಗಮ ಎಂದು ಎಸ್ಸಿ ಪ್ರಮಾಣಪತ್ರ ಸಹ ಪಡೆದಿದ್ದೇನೆ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿತನಾಗಿ ಅರ್ಜಿ ಸಹ ಸಲ್ಲಿಸಿದ್ದೇನೆ. ಆದರೆ ಪಕ್ಷ ನನ್ನ ಕೈಬಿಟ್ಟಿದೆ ಎಂದು ಹಿರೇಮಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ ತಿಳಿಸಿದ್ದಾರೆ. ಈಗಾಗಲೇ ಪಕ್ಷದಲ್ಲಿ ಇದ್ದುಕೊಂಡು ನನಗೆ ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗುವುದಿಲ್ಲ. ಹೀಗಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ನಾನು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ನಾನು ರಾಜೀನಾಮೆ ನೀಡಿದ ವಿಷಯ ತಿಳಿಯುತ್ತಿದ್ದಂತೆ ಹಲವು ಮುಖಂಡರು ದೂರವಾಣಿ ಕರೆ ಮಾಡಿದ್ದಾರೆ. ಪಕ್ಷ ಬಿಡದಂತೆ ತಿಳಿಸಿದ್ದಾರೆ. ಇದನ್ನ ಬುಧವಾರ ನಡೆಯುವ ನನ್ನ ಬೆಂಬಲಿಗರ ಸಭೆಯಲ್ಲಿ ಚರ್ಚಿಸುತ್ತೇನೆ. ನನ್ನ ಬೆಂಬಲಿಗರು ಯಾವ ನಿರ್ಣಯ ಕೈಗೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುವುದಾಗಿ ಹಿರೇಮಠ ಹೇಳಿದ್ದಾರೆ.
ಎಲ್ಲ ಸಹಜ ಸ್ಥಿತಿಗೆ ಬರುತ್ತದೆ-ರುದ್ರಪ್ಪ ಲಮಾಣಿ: ಈ ಹಿಂದೆ ಸಚಿವರಾಗಿದ್ದ ಮತ್ತು ಹಾವೇರಿ ಕ್ಷೇತ್ರದಲ್ಲಿ ಒಂದು ಬಾರಿ ಜಯ ಗಳಿಸಿದ್ದ ರುದ್ರಪ್ಪ ಲಮಾಣಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಲಭಿಸಿದೆ. ನಾನು ಸೇರಿದಂತೆ ಸುಮಾರು 10 ಜನ ಆಕಾಂಕ್ಷಿತರು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ಹೈಕಮಾಂಡ್ ಒಬ್ಬರಿಗೆ ಟಿಕೆಟ್ ನೀಡುವುದಾಗಿ ತಿಳಿಸಿತ್ತು. ಅದರಲ್ಲಿ ನನಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಕ್ಕ ನಂತರ ಜಿಲ್ಲಾಧ್ಯಕ್ಷ ಎಂ. ಎಂ ಹಿರೇಮಠ ರಾಜೀನಾಮೆ ವಿಷಯ ಸಹ ತಿಳಿದಿದೆ. ಅವರು ಯಾಕೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಇದು ನಮ್ಮ ಮನೆಯಲ್ಲಿನ ಜಗಳ. ಮನೆ ಎಂದ ಮೇಲೆ ಪಕ್ಷ ಎಂದ ಮೇಲೆ ಈ ರೀತಿ ಇರುವುದೇ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿಕೊಂಡು ಎಲ್ಲ ಸಹಜ ಸ್ಥಿತಿಗೆ ಬರುತ್ತದೆ ಎಂಬ ವಿಶ್ವಾಸವನ್ನು ಹಾವೇರಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ವ್ಯಕ್ತಪಡಿಸಿದ್ದಾರೆ.