ಹಾವೇರಿ:ನಾವು 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ 2018ರಲ್ಲಿ ಚುನಾವಣೆ ಗೆದ್ದು ಬಂದು ಶಾಸಕರಾಗಿದ್ದೆವು. ಕಾಂಗ್ರೆಸ್‌ನವರು ಮಾಡಿದ ದ್ರೋಹದಿಂದ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದೆವು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಮಂಗಳವಾರ ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ಗೆ ಹೋಗಿ ಅಲ್ಲಿಂದ 2019ರಲ್ಲಿ ಬಿಜೆಪಿಗೆ ಸೇರಿದೆವು. ಬಳಿಕ ಉಪಚುನಾವಣೆಯಲ್ಲಿ ಗೆದ್ದು ಈಗ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಪಿಂಪ್ ಎಂದು ಕರೀಬಹುದಾ?:ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರ 'ವೇಶ್ಯೆ' ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ಖಾರವಾಗಿ ತಿರುಗೇಟು ಕೊಟ್ಟರು. "ಹರಿಪ್ರಸಾದ್ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಾನು ಜನರಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಹರಿಪ್ರಸಾದ್ ಎಲ್ಲಿ ಆಯ್ಕೆಯಾಗಿದ್ದಾರೆ. ಅವರು ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಅವರು ಹಿಂದಿನ ಬಾಗಿಲಿನಿಂದ ಬಂದು ಶಾಸಕರಾಗಿದ್ದಾರೆ. ಈ ರೀತಿ ಹಿಂಬಾಗಿಲಿನಿಂದ ಬರುವವರಿಗೆ ಏನಂತ ಕರೆಯಬೇಕು?. ಬಹುಶಃ ಪಿಂಪ್ ಎಂದು ಕರೆಯಬಹುದಾ?. ಆದರೆ ಆ ರೀತಿ ಕರೆಯಲು ಆಗುವುದಿಲ್ಲ. ಇದು ಅವರ ಸಂಸ್ಕೃತಿ. ನಮ್ಮ ಸಂಸ್ಕೃತಿ ಬೇರೆ" ಎಂದರು. ಬಿ.ಕೆ ಹರಿಪ್ರಸಾದ್ ತಮ್ಮ ಸ್ಥಾನ, ಘನತೆಗೆ ತಕ್ಕಂತೆ ಗೌರವದಿಂದ ಮಾತನಾಡಿದರೆ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಜನ ಅವರನ್ನು ಬೆನ್ನತ್ತಿ ಹೊಡೆಯುತ್ತಾರೆ ಎಂದರು.
ಕಾಂಗ್ರೆಸ್ ಬುಡ ಅಲುಗಾಡುತ್ತಿದೆ: ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಕನಸಿನ ಸಾಮ್ರಾಜ್ಯ ಕಟ್ಟಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದಿದ್ದಾರೆ. ಈಗಲೇ ಸಿಎಂ ಹುದ್ದೆಗೆ ಕಚ್ಚಾಡುತ್ತಿದ್ದಾರೆ. ಬಿಜೆಪಿ ಪಕ್ಷ ದಿನೇ ದಿನೇ ಪ್ರಬಲವಾಗುತ್ತಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರನ್ನು ತಲುಪುತ್ತಿವೆ. ಇದನ್ನು ಸಹಿಸಲಾರದೆ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಿ ಶಾಸಕರಾದವರ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ತಳ ಅಲುಗಾಡುತ್ತಿದೆ. ಅವರು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.