ಕರ್ನಾಟಕ

karnataka

ಮಳೆ ಕುಂಠಿತ - ಸವಣೂರು ಏತ ನೀರಾವರಿ ಯೋಜನೆಗೆ ನೀರಿನ ಕೊರತೆ: ಆತಂಕದಲ್ಲಿ ರೈತರು

By ETV Bharat Karnataka Team

Published : Aug 23, 2023, 8:48 AM IST

Updated : Aug 23, 2023, 12:56 PM IST

Savanur lift irrigation project : ಈ ವರ್ಷ ಮಳೆ ಕುಂಠಿತವಾಗಿದ್ದು, ಸವಣೂರು ಏತ ನೀರಾವರಿ ಯೋಜನೆಗೆ ನೀರಿನ ಕೊರತೆ ಉಂಟಾಗಿದೆ. ಹೀಗಾಗಿ, ಕುಡಿಯುವ ನೀರಿನ ಕೊರತೆ ಉಂಟಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Savanur Irrigation Project
ಸವಣೂರು ಏತ ನೀರಾವರಿ ಯೋಜನೆ

ಸವಣೂರು ಏತ ನೀರಾವರಿ ಯೋಜನೆಗೆ ನೀರಿನ ಕೊರತೆ

ಹಾವೇರಿ : ಜಿಲ್ಲೆಯ ಪ್ರಮುಖ ನದಿಗಳಲ್ಲಿ ವರದಾ ಕೂಡ ಒಂದು. ವರದಾ ನದಿ ನೀರನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಸವಣೂರು ಏತ ನೀರಾವರಿ ಯೋಜನೆ ಕೂಡ ಒಂದಾಗಿದೆ. ಸುಮಾರು 780 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಏತ ನೀರಾವರಿ ಯೋಜನೆ ರೂಪಿಸಲಾಗಿದೆ. ಆದರೆ, ಈ ಬಾರಿ ವರದಾ ನದಿ ಹರಿವು ಕ್ಷೀಣಿಸಿದ್ದು, ರೈತರಲ್ಲಿ ಆತಂಕ ಮನೆಮಾಡಿದೆ.

ಹೌದು, ಸವಣೂರು ಏತ ನೀರಾವರಿ ಯೋಜನೆಯಿಂದ ಶಿಗ್ಗಾಂವ್ ಮತ್ತು ಕುಂದಗೋಳ ತಾಲೂಕುಗಳ ಸುಮಾರು 48 ಗ್ರಾಮಗಳ ಕೆರೆ ತುಂಬಿಸುವ ಯೋಜನೆ ರೂಪಿಸಲಾಗಿದೆ. ಆದರೆ, ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿಲ್ಲ. ಈ ಬಾರಿ ವರದಾ ನದಿಯ ಜಲಾನಯನ ಪ್ರದೇಶದಲ್ಲಿ ಸಹ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಪರಿಣಾಮ, ನದಿಯ ಹರಿವು ಕ್ಷೀಣಿಸಿದೆ. ಇತ್ತ ಸವಣೂರು ಏತ ನೀರಾವರಿ ನಿರ್ಮಿಸಿರುವ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬಾಂದರದಲ್ಲಿ ಸಹ ನೀರು ಕಡಿಮೆಯಾಗಿದೆ.

ಪ್ರತಿ ವರ್ಷ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಬಾಂದರ ಹಾಕಲಾಗುತ್ತಿತ್ತು. ಇದರಿಂದ ಸವಣೂರು ಏತ ನೀರಾವರಿಗೆ ನೀರು ಸಿಗುತ್ತಿತ್ತು. ಆದರೆ, ಪ್ರಸ್ತುತ ವರ್ಷ ಆಗಸ್ಟ್ ತಿಂಗಳಲ್ಲಿನಲ್ಲೇ ನೀರಿನ ಕೊರತೆ ಕಾಣಸಿದೆ. ಹೀಗಾಗಿ, ಬಾಂದರ ಒಂದು ಗೇಟ್ ಹಾಕಲಾಗಿದ್ದು, ಅಲ್ಪಸ್ವಲ್ಪ ಪ್ರಮಾಣದ ನೀರು ತಡೆಯುವ ಪ್ರಯತ್ನ ನಡೆದಿದೆ. ಅಗಸ್ಟ್ ತಿಂಗಳಲ್ಲೇ ಈ ರೀತಿಯಾದರೆ ಮುಂದೆ ಹೇಗೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಒಂದು ಕಡೆ ಏತ ನೀರಾವರಿಗೆ ನೀರು ಸಾಲುತ್ತಿಲ್ಲ. ಇನ್ನೊಂದಡೆ, ನದಿಯಲ್ಲಿ ನೀರು ನಿಲ್ಲಿಸುವ ಪ್ರಯತ್ನ ಅಗಸ್ಟ್‌ನಲ್ಲಿ ಆರಂಭವಾಗಿದೆ. ಈ ರೀತಿ ನಿಲ್ಲಿಸಿದ ನೀರನ್ನು ಅಕ್ಕಪಕ್ಕದ ಜಮೀನಿನ ರೈತರು ಹೊಲಗಳಿಗೆ ಹಾಯಿಸುತ್ತಾರೆ. ಹೀಗಾದರೆ ನದಿಯಲ್ಲಿ ನೀರು ನಿಲ್ಲುವುದು ಯಾವಾಗ?, ಕಳಸೂರು ಗ್ರಾಮದ ಜನರಿಗೆ, ದನ - ಕರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಬರಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

"ಸರ್ಕಾರಕ್ಕೆ ಕಳಸೂರು ಗ್ರಾಮದ ಬಾಂದರ ಏರಿಸಿ ಅಂತಹ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ಇತ್ತ ಗಮನ ಹರಿಸಿಲ್ಲ. ಒಂದು ಕಡೆ ಬಾಂದರ ಕಂ ಸೇತುವೆ ಎತ್ತರ ಸಹ ಕಡಿಮೆ ಇದೆ. ಇದರಿಂದ ಮಳೆಗಾಲದಲ್ಲಿ ಕಳಸೂರು ಮೂಲಕ ಓಡಾಡುವ 33 ಗ್ರಾಮಗಳ ಜನರು ಜಿಲ್ಲಾಡಳಿತದ ಸಂಪರ್ಕದಿಂದ ವಂಚಿತರಾಗುತ್ತಿದ್ದಾರೆ. ಪ್ರತಿ ವರ್ಷ ಮಳೆ ಬಂದಾಗ ಸಮಸ್ಯೆ ಎದುರಾಗುತ್ತದೆ, ಮಳೆ ಕಡಿಮೆಯಾಗುತ್ತಿದ್ದಂತೆ ಸೇತುವೆ ಮುಕ್ತವಾಗುತ್ತದೆ. ಆದರೆ, ನಿರೀಕ್ಷಿತ ಪ್ರಮಾಣದ ನೀರು ಬಾಂದರದಲ್ಲಿ ಸಂಗ್ರಹವಾಗುತ್ತಿಲ್ಲ. ಸರ್ಕಾರ ಸೇತುವೆಯನ್ನು ಎತ್ತರಕ್ಕೆ ಏರಿಸಿದರೆ ಒಂದು ಕಡೆ ನೀರಿನ ಸಂಗ್ರಹ ಹೆಚ್ಚಾಗುತ್ತದೆ. ಜೊತೆಗೆ, ಅಧಿಕ ಮಳೆಯಾದಾಗ ಸೇತುವೆ ಮುಳುಗುವ ಆತಂಕವಿಲ್ಲ. ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕೂಡಲೇ ಗಮನ ಹರಿಸಬೇಕು" ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಮಹಾರಾಷ್ಟ್ರ ಗ್ರಾಮಸ್ಥರ ನೀರಿನ ಬವಣೆ ನೀಗಿಸುತ್ತಿರುವ ಕರ್ನಾಟಕ: ಸ್ಥಳೀಯರಿಂದ ಮೆಚ್ಚುಗೆ

Last Updated : Aug 23, 2023, 12:56 PM IST

ABOUT THE AUTHOR

...view details