ಹಾವೇರಿ:ಪೊಲೀಸ್ ಇಲಾಖೆಯೆಂದರೆ ಸಾಕು ಸದಾ ಒತ್ತಡದ ಕೆಲಸ. ಕೈಯಲ್ಲಿ ಲಾಟಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಚಿತ್ರಗಳು ಕಣ್ಮುಂದೆ ಬರುತ್ತವೆ. ಆದರೆ ಹಾವೇರಿಯಲ್ಲೊಬ್ಬ ಪೊಲೀಸ್ ಸಿಬ್ಬಂದಿ ಕೈಯಲ್ಲಿ ಲಾಟಿ ಹಿಡಿಯಲೂ ಸೈ, ಕುಂಚ ಹಿಡಿಯಲು ಕೂಡಾ ಸೈ ಎಂದು ನಿರೂಪಿಸಿದ್ದಾರೆ. ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಕರಿಯಪ್ಪ ಹಂಚಿನಮನಿ ಕಳೆದ 23 ವರ್ಷಗಳಿಂದ ಕರ್ತವ್ಯದ ಅವಧಿಯ ನಡುವೆಯೇ ತಮ್ಮನ್ನು ಚಿತ್ರಕಲೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಅರ್ಕ್ಯಾಲಿಕ್, ಜಲವರ್ಣ, ಪೋಸ್ಟ್ರ್ಯಾಕ್ ಮತ್ತು ತೈಲವರ್ಣ ಮತ್ತು ಮಿಕ್ಸ್ ಮೀಡಿಯಾಗಳಲ್ಲಿ ಕರಿಯಪ್ಪ ಕಲಾಕೃತಿ ರಚಿಸುತ್ತಾರೆ. ಪ್ರಮುಖವಾಗಿ, ಇವರು ಅರ್ಕ್ಯಾಲಿಕ್ ಕ್ಯಾನ್‌ವಾಸ್ ಆಯ್ಕೆ ಮಾಡಿಕೊಂಡಿದ್ದಾರೆ. ಕರಿಯಪ್ಪ ಅತಿ ಹೆಚ್ಚು ಒತ್ತುಕೊಟ್ಟಿದ್ದು ಜಾನಪದ ಕಲಾ ಪ್ರಕಾರಗಳಿಗೆ. ಗೊರವಪ್ಪ, ದುರ್ಗಮುರ್ಗಿ, ಡೊಳ್ಳುಕುಣಿತ, ಬುಡಬುಡಿಕೆ, ಗೊರವಪ್ಪ ಬಾರಿಸುವ ಡಮರುಗಗಳು ಸೇರಿದಂತೆ ವಿವಿಧ ಚಿತ್ರಗಳು ಇವರ ಕುಂಚದಲ್ಲರಳಿವೆ.
ಜಾನಪದ ಕಲಾಪ್ರಕಾರಗಳ ಜೊತೆಗೆ ವ್ಯಕ್ತಿಚಿತ್ರಗಳನ್ನೂ ಇವರು ರಚಿಸಬಲ್ಲರು. ರಿಯಲಿಸ್ಟಿಕ್ ಚಿತ್ರಗಳು ಪ್ರಸ್ತುತ ವಿದ್ಯಮಾನಗಳನ್ನು ನೋಡುಗರ ಮುಂದೆ ತೆರೆದಿಡುತ್ತವೆ. ಕರಿಯಪ್ಪ ಹಂಚಿನಮನಿ ಚಿತ್ರಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಹೊಂದಿವೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ತಂದುಕೊಟ್ಟಿವೆ.