ಹಾವೇರಿ:ರಾಜ್ಯದಲ್ಲಿ ನೆರೆ, ಕೋವಿಡ್ ಇದೆ. ಸಚಿವ ಸಂಪುಟ ವಿಸ್ತರಣೆಯಾಗಬೇಕಿದೆ. ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಈ ಕುರಿತಂತೆ ಚರ್ಚಿಸುತ್ತಿದ್ದಾರೆ. ನಾವಂತೂ ಆಶಾವಾದಿಯಾಗಿದ್ದೇವೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಬಂದ ನಮ್ಮನ್ನ ಬಿಜೆಪಿ ನಾಯಕರು ಇದುವರೆಗೂ ಚೆನ್ನಾಗಿ ನೋಡಿಕೊಂಡಿದ್ದಾರೆ. ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸಹ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ರಬ್ಬರ್ ಸ್ಟಾಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯ ರಬ್ಬರ್ ಸ್ಟಾಂಪ್ ಆಗಿದ್ರಾ? ಎಂದು ಪ್ರಶ್ನಿಸಿದರು.
ನಮ್ಮ ಜೊತೆ ಬಂದವರನ್ನ ಬಿಡುತ್ತಾರೆ ಎಂಬುವುದು ಊಹಾಪೋಹ. ಮುನಿಸಿಕೊಂಡ ಹಿರಿಯ ನಾಯಕರ ಬಗ್ಗೆ ಮಾತನಾಡುವಷ್ಟು ನಾವು ದೊಡ್ಡವರಲ್ಲ. ವರಿಷ್ಠರು ಅದನ್ನೆಲ್ಲ ಸರಿಪಡಿಸುತ್ತಾರೆ. ಆದರೆ, ಹೋದರೆ ಈ ರೀತಿ ಹೇಳಿಕೆಗಳಿಗೆಲ್ಲ ಉತ್ತರ ಕೊಟ್ಟುಕೊಂಡು ಹೋಗುವುದು ಸರಿಯಲ್ಲ ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿ ಅಧಿಕಾರಾವಧಿ ಬಗ್ಗೆ ಮೈಲಾರ ಧರ್ಮದರ್ಶಿ ಹೇಳಿರುವ ಹೇಳಿಕೆ ಬಗ್ಗೆ ಅವರನ್ನೇ ಕೇಳಿ. ಪ್ರಜಾಪ್ರಭುತ್ವದಲ್ಲಿ ಜನರು ಅಧಿಕಾರಾವಧಿ ನಿರ್ಧರಿಸುತ್ತಾರೆ. ಅಧಿಕಾರದ ಬಗ್ಗೆ ಮಾತನಾಡುವವರು ಕೊರೊನಾದ ಬಗ್ಗೆ ಹೇಳಲಿ ಎಂದು ಸವಾಲೆಸಿದರು.
ಬಸವರಾಜ ಬೊಮ್ಮಾಯಿ ಸಿಎಂ ಆದ ನಂತರ ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿಯಾಗಿರುವುದಕ್ಕೆ ಅನ್ಯ ಅರ್ಥ ಕಲ್ಪಿಸುವುದು ಬೇಡ. ನಾನು ಯಾವ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಯಾವುದು ಎಂಬುದನ್ನ ನಿರೀಕ್ಷೆ ಮಾಡಿಲ್ಲ. ಬೊಮ್ಮಾಯಿ ಅವರ ಆಡಳಿತದಿಂದ ಕರ್ನಾಟಕದ ಸಮಗ್ರ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದರು.