ಹಾವೇರಿ: ಶಕ್ತಿ ಯೋಜನೆ ಯಾವ ಉದ್ದೇಶಕ್ಕಾಗಿ ಹೆಣ್ಣುಮಕ್ಕಳಿಗೆ ಫ್ರೀ ಮಾಡಿದಾರೋ ಅದಕ್ಕೆ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ಉದ್ದೇಶ ಈಡೇರಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಬಸ್ಗಳನ್ನು ಎಲ್ಲಾ ರೂಟ್ಗಳಿಗೆ, ಶೆಡ್ಯೂಲ್ಗಳಿಗೆ ಪೂರ್ವ ನಿಯೋಜಿತದಂತೆ ಬಿಡಬೇಕಾಗಿರೋದು ಸಾರಿಗೆ ನಿಗಮಗಳ ಕರ್ತವ್ಯ. ಉಚಿತ ಯೋಜನೆಗಳು ಹೆಣ್ಣುಮಕ್ಕಳಿಗೆ ಏನು ಬೇಕೋ ಅದನ್ನು ಮಾಡಲಿ. ಆದರೆ ಯೋಜನೆಗಳ ಜಾರಿಗೆ ಮಾಡುವ ಭರದಲ್ಲಿ ರೂಟ್ ಕ್ಯಾನ್ಸಲ್ ಮಾಡುವುದು, ಒಂದೇ ಬಸ್ ಬಿಡೋದು, ಈ ರೀತಿಯ ಹಲವಾರು ದೂರುಗಳು ಬರುತ್ತಿವೆ ಎಂದು ಬೊಮ್ಮಾಯಿ ತಿಳಿಸಿದರು.
ಸಾರ್ವಜನಿಕರಿಗೂ ಬಹಳ ತೊಂದರೆ ಆಗ್ತಾ ಇದೆ. ಶಾಲಾ ಮಕ್ಕಳಿಗೂ ತೊಂದರೆ ಆಗ್ತಾ ಇದೆ. ಇದರಿಂದ ಶಾಲಾ ಮಕ್ಕಳು ಬಸ್ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡ್ತಾ ಇದಾರೆ. ಹಾನಗಲ್ ತಾಲೂಕಿನಲ್ಲಿ ನಿನ್ನೆ ಒಂದು ಅನಾಹುತ ಕೂಡ ಆಗಿದೆ ಈ ತರ ಆಗದೇ ಇರೋ ಹಾಗೆ ನೋಡಿಕೊಳ್ಳಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.
ವ್ಯವಸ್ಥೆ ಹದಗೆಡಬಾರದು, ಒಂದೊಳ್ಳೆ ಕಾರ್ಯಕ್ರಮ ಇದ್ದಾಗ ಸಮರ್ಪಕವಾಗಿ ತಯಾರಿ ಮಾಡಿಕೊಳ್ಳಬೇಕು. ಈ ಗುರುತರ ಜವಾಬ್ದಾರಿ ಎನ್ಡಬ್ಲು ಕೆಎಸ್ಆರ್ಟಿಸಿ ಎಂ.ಡಿ ಮೇಲಿದೆ ಎಂದು ಬೊಮ್ಮಾಯಿ ತಿಳಿಸಿದರು. ಒಂದು ವಾರದಲ್ಲಿ ಈ ಸಮಸ್ಯೆಗಳನ್ನು ಅವರು ಸರಿ ಮಾಡಬೇಕು ಎಂಬ ಆಗ್ರಹ ಮಾಡ್ತೀನಿ. ಇಲ್ಲದಿದ್ದರೆ ಯಾವ ಉದ್ದೇಶಕ್ಕಾಗಿ ಹೆಣ್ಣುಮಕ್ಕಳಿಗೆ ಫ್ರೀ ಮಾಡಿದಾರೋ ಆ ಉದ್ದೇಶ ಈಡೇರಲ್ಲ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.