ಹಾವೇರಿ:ಹೃದ್ರೋಗ ತಜ್ಞರು ನನಗೆ ಹೆಚ್ಚಿಗೆ ಮಾತನಾಡಬೇಡ ಎಂದಿದ್ದಾರೆ. ಆದರೆ, ನೀವೇ ನನ್ನ ಹೃದಯವಾಗಿದ್ದರಿಂದ ಅವರ ಸಲಹೆ ಪಾಲಿಸಲಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹೃದಯ ಮತ್ತು ಮಂಡಿ ಶಸ್ತ್ರಚಿಕಿತ್ಸೆ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರದ ಜನರನ್ನು ಭೇಟಿಯಾಗಿ ಮಂಗಳವಾರ ಮಾತನಾಡಿದ ಅವರು, ನಿಮ್ಮ ಭೇಟಿ ಬಳಿಕ ನನಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿರುವುದನ್ನೇ ಮರೆತಿರುವೆ ಎಂದು ಭಾವುಕರಾದರು.
ಕಳೆದ ಒಂದೂವರೆ ವರ್ಷದಿಂದ ಮಂಡಿನೋವಿನಿಂದ ಬಳಲುತ್ತಿದ್ದ ನಾನು ಶಸ್ತ್ರಚಿಕಿತೆ ಮಾಡಿಸಲು ಹೋಗಿದ್ದೆ. ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾಗ ಶಸ್ತ್ರಚಿಕಿತ್ಸೆಗೆ ಸಮಯ ಸಿಕ್ಕಿರಲಿಲ್ಲ. ಆದರೆ, ಶಸ್ತ್ರಚಿಕಿತ್ಸೆಗೂ ಮುನ್ನ ಹೃದಯ ತಪಾಸಣೆ ಮಾಡಬೇಕು. ಅದು ಆರೋಗ್ಯಪೂರ್ಣವಾಗಿದ್ದರೆ ಮಾತ್ರ ಮಂಡಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಇಸಿಜಿ ಇಕೋ ಮಾಡಿಸಿದಾಗ ಹೃದಯದಲ್ಲಿ ಯಾವ ಸಮಸ್ಯೆಯೂ ಕಾಣಿಸಿಕೊಳ್ಳಲಿಲ್ಲ. ಆದರೆ, ಆಂಜಿಯೋಗ್ರಾಮ್ (ರಕ್ತನಾಳ) ಪರೀಕ್ಷಿಸಿದಾಗ ಹೃದಯದಲ್ಲಿ ಎರಡು ಸಣ್ಣ, ಒಂದು ದೊಡ್ಡದಾದ ಬ್ಲಾಕ್ಗಳಿರುವುದು ಗೊತ್ತಾಯಿತು. ವೈದ್ಯರಿಗೆ ನೋವಿನ ಅನುಭವವಾಗಿಲ್ಲ ಎಂದು ತಿಳಿಸಿದೆ. ವೈದ್ಯರು ಸಕ್ಕರೆ ಖಾಯಿಲೆ ಇರುವ ಕಾರಣ ನೋವಿನ ಅರಿವು ಬಂದಿಲ್ಲವೆಂದರು. ಈ ಹಿನ್ನೆಲೆ ಸ್ಟಂಟ್ ಅಳವಡಿಸುವ ಬದಲು ಹೃದಯ ಶಸ್ತ್ರಚಿಕಿತ್ಸೆ ಮಾಡಿದರು. ಈಗ ನಾನು ಮೊದಲಿಗಿಂತ ಹೆಚ್ಚು ಉತ್ಸಾಹ ಭರಿತನಾಗಿದ್ದೇನೆ. ಇದೆಲ್ಲ ನಡೆದಿರುವುದು ಕ್ಷೇತ್ರದ ಜನಸ್ಥೋಮದ ಆಶೀರ್ವಾದ ಮತ್ತು ಪುಣ್ಯದ ಫಲದಿಂದ. ದೇವಿಯ ಅನುಗ್ರಹದಿಂದ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ತಮ್ಮ ಆರೋಗ್ಯದ ಗುಟ್ಟು ಬಿಟ್ಟುಕೊಟ್ಟರು.
ಇದೆಲ್ಲವೂ ಗೊತ್ತಾಗದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ದೇವರು ನಿಮ್ಮ ಸೇವೆ ಮಾಡಲು ಪುನರ್ಜನ್ಮ ನೀಡಿದ್ದಾನೆ. ನಾವೆಲ್ಲ ಒಂದೇ ಕುಟುಂಬದ ಸದಸ್ಯರಿದ್ದಂತೆ. ನಮ್ಮ ನಡುವೆ ಅವಿನಾಭಾವ ಸಂಬಂಧವಿದ್ದು, ಮುಂದಿನ ಜನ್ಮ ಅನ್ನುವುದಿದ್ದರೆ ನನ್ನನ್ನು ಶಿಗ್ಗಾಂವಿ - ಸವಣೂರು ತಾಲೂಕಿನ ಮಣ್ಣಿನಲ್ಲಿ ಹುಟ್ಟಿಸಲಿ. ದೇವರಲ್ಲಿ ಇದನ್ನೇ ಬೇಡಿಕೊಳ್ಳುವೆ ಎಂದರು.
ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು ಎನ್ನುವ ಅರಿವು ನನಗಾಗಿದೆ. ರಾಜ್ಯದ ಜನರೆಲ್ಲ ನನ್ನ ಆರೋಗ್ಯ ವಿಚಾರಿಸಿ ನಮ್ಮ ಕೆಲಸಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಕೇವಲ ನೈಸರ್ಗಿಕ ಶ್ರೀಮಂತವಷ್ಟೇ ಅಲ್ಲ ಇಲ್ಲಿಯ ಜನ ಹೃದಯ ಶ್ರೀಮಂತರಿದ್ದಾರೆ. ರಾಜಕಾರಣಿಗೆ ತಾನು ಮಾಡಿದ ಕೆಲಸ ಅಲ್ಪ ಅನ್ನಿಸುತ್ತದೆ. ಇನ್ನು ಹೆಚ್ಚಿನ ಕೆಲಸ ಮಾಡಬೇಕು ಎನ್ನುವುದು ಮನದಲ್ಲಿ ಬರುತ್ತದೆ ಎಂದು ತಿಳಿಸಿದರು.