ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾವೇರಿ:ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದು, ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು. ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಹಿಂದೂ ಮಹಾಗಣಪತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.
ರಾಜ್ಯ ಕಾಂಗ್ರೆಸ್ ನಿರ್ಧಾರಗಳ ಕುರಿತು ವಿರೋಧ ವ್ಯಕ್ತಪಡಿಸಿದ ಸಚಿವರು, "ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹರಿದು ಹಾಕಿದರು. ಸುಪ್ರೀಂ ಕೋರ್ಟ್ ತೀರ್ಪು ಬಂದರೂ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸಲು ಬಿಡಲಿಲ್ಲ. ಅವರು ತಲ್ವಾರ್ ಇಟ್ಟರೂ ಕೇಳೋ ಧೈರ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ" ಎಂದು ವ್ಯಂಗವಾಡಿದರು.
ಮುಂದುವರೆದು ಮಾತನಾಡಿ, "ನಿಮ್ಮ ರಾಜಕೀಯ ಚಟಕ್ಕಾಗಿ ದೇಶ ಒಡೆಯುವ, ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುವ ಜನರನ್ನು ಬೆಂಬಲಿಸಬೇಡಿ. ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರ ಮೇಲಿನ ಕೇಸು ತೆಗೆಯುವ ಡಿಕೆಶಿಗೆ ಉತ್ತರ ಕೊಡಬೇಕಿದೆ. ಇಂದು ದೇಶದಲ್ಲಿ ಮೋದಿ ಸರ್ಕಾರ ಇದ್ದು, ಭಯೋತ್ಪಾದಕರ ಕಾಟ ಇಲ್ಲ. ಮೋದಿ ಸರ್ಕಾರ ಬಂದ ನಂತರ ಈಗ ಹೈದ್ರಾಬಾದ್ನಲ್ಲಿ ಬಾಂಬ್ ಸಿಡಿಯುತ್ತಿದೆಯೇ?. ಪಾಕಿಸ್ತಾನ ಜಿಂದಾಬಾದ್ ಎಂದವರ ಮೇಲಿನ ಕೇಸ್ ತೆಗೆಯುತ್ತಾರಂತೆ. ನಿಮ್ಮ ತುಷ್ಟೀಕರಣ ಮನೇಲಿ ಇಟ್ಟುಕೊಳ್ಳಿ, ಬಿರಿಯಾನಿ ತಿನ್ನಿಸಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಇನ್ನೆರಡು ವರ್ಷದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣ ಕಿತ್ತು ಹಾಕುವ ಕೆಲಸ ಮೋದಿ ಸರ್ಕಾರ ಮಾಡಲಿದೆ. ಹುಬ್ಬಳ್ಳಿ, ಕೆ.ಜೆ.ಹಳ್ಳಿ ಪ್ರಕರಣವನ್ನು ಹಿಂಪಡೆಯುತ್ತೇವೆ ಎಂದಿದ್ದಾರೆ. ಇದರಿಂದ ಗಲಭೆ ಸೃಷ್ಟಿಸಿದವರಿಗೆ ನಾವೇನು ಮಾಡಿದರೂ ನಡೆಯುತ್ತೆ ಎಂಬ ಧೈರ್ಯ ಬಂದಿದೆ. ಇದೇ ಕಾರಣಕ್ಕೆ ಶಿವಮೊಗ್ಗ, ಕೋಲಾರದಲ್ಲಿ ಮತ್ತೆ ಈ ರೀತಿಯ ಘಟನೆಗಳು ನಡೆದವು" ಎಂದರು.
ಸನಾತನ ಧರ್ಮವನ್ನು ಮಲೇರಿಯಾ ಎಂದರೆ ಸುಮ್ನೆ ಕೂರಬೇಕಾ?- ಬೊಮ್ಮಾಯಿ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಹಿಂದೂ ಧರ್ಮ ಸನಾತನ ಧರ್ಮ. ವಿಶ್ವದ ಮಾನವರ ಕಲ್ಯಾಣ ಧರ್ಮ. ಆದರೆ ಕೆಲವರು ಸನಾತನ ಧರ್ಮವನ್ನು ಪ್ರಶ್ನೆ ಮಾಡುತ್ತಾರೆ, ಮಲೇರಿಯಾ ಅನ್ನುತ್ತಾರೆ. ಹೀಗೆಲ್ಲಾ ಎನ್ನುವಾಗ ನಾವೆಲ್ಲಾ ಸುಮ್ಮನೆ ಕೂರಬೇಕಾ" ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.
"ನಮ್ಮ ದೇಹದಲ್ಲಿ ಸನಾತನ ಹಿಂದೂ ಧರ್ಮದ ರಕ್ತ ಹರಿಯುತ್ತಿದೆ. ನಮ್ಮನ್ಮು ತಡವಿದರೆ ನಾವು ಸುಮ್ಮನೆ ಕೂರುವುದಿಲ್ಲ. ಈ ದೇಶದಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ. ಆದರೆ ಬಾಜೂಕಿನ ರಾಷ್ಟ್ರಗಳ ಕಡೆ ಹೋಗಿ ನೋಡಿ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಒಂದೇ ಒಂದು ಧರ್ಮ ಇದೆ. ಅಲ್ಲಿ ಬೇರೆ ಧರ್ಮದವರು ಜೀವಂತ ಬದುಕಲೂ ಸಾಧ್ಯವಿಲ್ಲ. ನಾವು ಎಲ್ಲರನ್ನೂ ಒಪ್ಪಿಕೊಂಡು ಬಾಳುತ್ತಿದ್ದೇವೆ. ಇಂಥ ವಿಶಾಲ ಧರ್ಮಕ್ಕೆ ಡೆಂಗ್ಯು, ಮಲೇರಿಯಾ ಅನ್ನುತ್ತಾರಲ್ಲ?. ಇವರು ಇದೇ ಮಾತನ್ನು ಬೇರೆ ಧರ್ಮದ ಬಗ್ಗೆ ಹೇಳಲಿ, ಇಷ್ಟೊತ್ತಿಗೆ ಅವರ ಗತಿ ಏನಾಗುತ್ತಿತ್ತು ಎಂದು ಕಿಡಿಕಾರಿದರು. ಎಲ್ಲಾ ಕಡೆಯೂ ಕೋಮ ಗಲಭೆ ಆಗುತ್ತಿದೆ. ಕಾಂಗ್ರೆಸ್ ಆರಿಸಿ ಬಂದ ದಿನವೇ ಬೆಳಗಾವಿಯಲ್ಲಿ ಪಾಕಿಸ್ತಾನ ಧ್ವಜ ಹಾರಿದೆ. ಪಾಕಿಸ್ತಾನದ ಧ್ವಜ ಹಿಡಿದವರು ಸರ್ಕಾರದ ಮೊಮ್ಮಕ್ಕಳು" ಎಂದು ಬೊಮ್ಮಾಯಿ ಲೇವಡಿ ಮಾಡಿದರು.
ಶಿವಮೊಗ್ಗ ಗಲಭೆ ಕುರಿತು ಮಾತನಾಡಿ, "ರಾಗಿ ಗುಡ್ಡದಲ್ಲಿ ಗಣೇಶೋತ್ಸವ ನಡೆದಾಗ ಒಂದು ಸಣ್ಣ ಘಟನೆಯೂ ನಡೆಯಲಿಲ್ಲ. ಆದರೆ ಒಂದು ವಾರದ ಬಳಿಕ ಈದ್ ಮಿಲಾದ್ ಹಬ್ಬದಲ್ಲಿ ಕಲ್ಲು ತೂರಾಟ ನಡೆಯಿತು. ಆದರೆ ಮಂತ್ರಿಗಳು ಬಿಜೆಪಿಯವರೇ ವೇಷ ಹಾಕಿಕೊಂಡು ಈ ರೀತಿ ಮಾಡುತ್ತಾರೆಂದು ಹೇಳಿದ್ದಾರೆ. ಆದರೆ ನಮ್ಮ ಹುಡುಗರು ಇನ್ನೊಂದು ವೇಷ ಹಾಕಿಕೊಳ್ಳುವ ಹೇಡಿಗಳಲ್ಲ".
"ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ನ್ಯಾಯ, ನೀತಿ, ಧರ್ಮ ಇದ್ದಲ್ಲಿ ಹಿಂದುತ್ವ ಇದೆ. ಈ ವರ್ಷ ನರೇಂದ್ರ ಮೋದಿಜಿಯವರ ಆಡಳಿತದ 10ನೇ ವರ್ಷವಾಗಿದ್ದು, ರಾಷ್ಟ್ರವನ್ನು ಅತ್ಯಂತ ಪ್ರಬಲವಾಗಿ ಮುನ್ನಡೆಸುತ್ತಿದ್ದಾರೆ. ಜನವರಿ ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮನ ಪುನರ್‌ಸ್ಥಾಪನೆ ಆಗಲಿದ್ದು, ಈ ದೇಶದಲ್ಲಿ ಮತ್ತೊಮ್ಮೆ ಧರ್ಮದ ಪುನರ್‌ಸ್ಥಾಪನೆ ಆಗಲಿದೆ. ಇದು ನಮ್ಮೆಲ್ಲರ ಕನಸು" ಎಂದು ಬೊಮ್ಮಾಯಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಇದನ್ನೂ ಓದಿ:ಹುಬ್ಬಳ್ಳಿ ಕೆಜಿ ಹಳ್ಳಿ, ಡಿಜೆ ಹಳ್ಳಿ ಕೇಸ್ ವಾಪಸ್ ಬೇಡ.. ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದೆ: ಪ್ರಹ್ಲಾದ್ ಜೋಶಿ