ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂತಿಮ ಘಟ್ಟ ತಲುಪಿದ್ದು, ಮುಂಬರಲಿರುವ 87ನೇ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬುದರ ಕುರಿತಂತೆ ಶನಿವಾರ ರಾತ್ರಿ ಕ.ಸಾ.ಪ ಕಾರ್ಯಕಾರಿಣಿ ಸಭೆ ನಡೆಯಿತು. ಈ ಸಭೆಯಲ್ಲಿ ಬಹುತೇಕ ಸದಸ್ಯರು ತಮ್ಮ ತಮ್ಮ ಜೆಲ್ಲೆಗಳಿಗೆ ಪ್ರಾಶಸ್ತ್ಯ ನೀಡುವಂತೆ ಆರೋಗ್ಯಕರ ಚರ್ಚೆ ನಡೆಸಿದರು ಎಂದು ಕ.ಸಾ.ಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ತಿಳಿಸಿದರು. ಮಂಡ್ಯ, ಚಿಕ್ಕಮಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳು ಸಮ್ಮೇಳನದ ಆತಿಥ್ಯಕ್ಕೆ ಪೈಪೋಟಿ ನಡೆಸಿವೆ. ಆದರೆ ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಚರ್ಚೆ ಅರ್ಧಕ್ಕೆ ಮೊಟಕುಗೊಂಡಿದೆ. ರವಿವಾರ ಮುಂಜಾನೆ ಮತ್ತೆ ಸಭೆ ಸೇರಿ ಮುಂದಿನ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಕಾಗಿನೆಲೆ ನಿರಂಜನಾನಂದ ಪುರಿ ಶ್ರೀಗಳು, 'ಕನ್ನಡವನ್ನು ನಾವು ಹೀನಾಯ ಸ್ಥಿತಿಗೆ ತಂದಿದ್ದೇವೆ. ಮುಂದಿನ ಸಮ್ಮೇಳನದಲ್ಲಿ ಕನ್ನಡದ ಬಗ್ಗೆ ಈ ರೀತಿಯಾಗಿ ಮಾತನಾಡುವ ವ್ಯವಸ್ಥೆಯಾಗಬಾರದು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 'ಪ್ರಸ್ತುತ ದಿನಗಳಲ್ಲಿ ಕನ್ನಡದ ಪರಿಸ್ಥಿತಿ ಬಹಳ ಕೆಟ್ಟು ಹೋಗಿದೆ. ಕನ್ನಡ ಭಾಷೆಯನ್ನು ನಾವು ಯಾವ ರೀತಿ ಬಳಸಿ ಹಾಳು ಮಾಡುತ್ತಿದ್ದೇವೆ ಎಂಬುದರೆಡೆಗೆ ಗಮನ ಹರಿಸಬೇಕಿದೆ' ಎಂದರು.
ಇನ್ನು, ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿದ್ದಾರೆ. ಸಮ್ಮೇಳನದ ವೇದಿಕೆಗಳು, ಗೋಷ್ಠಿಗಳು, ಪ್ರದರ್ಶನಗಳು, ಪುಸ್ತಕ ಮಳಿಗೆಗಳಲ್ಲಿ ಎಲ್ಲಿ ನೋಡಿದದಲ್ಲಿ ಜನರು ತುಂಬಿದ್ದು ಕಂಡುಬಂತು. ಒಟ್ಟು 300ಕ್ಕೂ ಅಧಿಕ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದ್ದು, ಜನರು ಖರೀದಿಗೆ ಮುಗಿಬಿದ್ದರು.